ಮಂಗಳೂರು : ಮನೆಯ ಪೈಂಟಿಂಗ್ ಕೆಲಸಕ್ಕೆ ಬಂದಿದ್ದ ಇಬ್ಬರು ಕಾರ್ಮಿಕರು, ಮನೆಯವರು ಊರಿಗೆ ತೆರಳಿದ್ದ ಸಂದರ್ಭವನ್ನು ಬಳಸಿಕೊಂಡು ಅಡುಗೆ ಕೋಣೆಯಲ್ಲಿದ್ದ ಬರೋಬ್ಬರಿ ₹15.30 ಲಕ್ಷ ಮೌಲ್ಯದ 136 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ನಗರದ ಅತ್ತಾವರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅತ್ತಾವರದ ಜೈನ್ ಕಂಪೌಂಡ್ನಲ್ಲಿರುವ ‘ಇಂದ್ರಧನುಷ್ ಅಪಾರ್ಟ್ಮೆಂಟ್’ ನಿವಾಸಿ, ಮಾಜಿ ಸೈನಿಕ ಮೇಕೇರಿರ ಬಿದ್ದಪ್ಪ ರಾಜಾ ಎಂಬವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಪೈಂಟಿಂಗ್ ಕೆಲಸಕ್ಕೆ ಬಂದಿದ್ದ ಇಬ್ಬರು ಕಾರ್ಮಿಕರ ಮೇಲೆ ಕಳ್ಳತನದ ಶಂಕೆ ವ್ಯಕ್ತಪಡಿಸಿ ಪ್ರಕರಣ ದಾಖಲಿಸಲಾಗಿದೆ.
ಮಾಜಿ ಸೈನಿಕ ಬಿದ್ದಪ್ಪ ರಾಜಾ ಅವರು ತಮ್ಮ ಫ್ಲ್ಯಾಟ್ನ (ಬಿ-5) ಪೈಂಟಿಂಗ್ ಕೆಲಸವನ್ನು ಪರಿಚಯಸ್ಥ ವ್ಯಕ್ತಿಯೊಬ್ಬರಿಗೆ ವಹಿಸಿದ್ದರು. ಸೆಪ್ಟೆಂಬರ್ 28 ಮತ್ತು 29ರಂದು ಬಿದ್ದಪ್ಪ ರಾಜಾ ಹಾಗೂ ಪತ್ನಿ ಮನೆಯಲ್ಲಿರುವಾಗಲೇ ಇಬ್ಬರು ಪೈಂಟಿಂಗ್ ಕೆಲಸ ಮಾಡಿದ್ದರು. ಆದರೆ, ಸೆಪ್ಟೆಂಬರ್ 30ರಂದು ಶಾಂತಿ ಅವರ ಸಹೋದರಿ ಮೈಸೂರಿನಲ್ಲಿ ನಿಧನರಾದ ಕಾರಣ ದಂಪತಿ ಮೈಸೂರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅಕ್ಟೋಬರ್ 2ರಿಂದ 4ರವರೆಗೆ ಪರಿಚಯದ ಪೈಂಟಿಂಗ್ ಕಾರ್ಮಿಕ ಬಂದು ಬಾಕಿ ಉಳಿದಿದ್ದ ಪೈಂಟಿಂಗ್ ಕೆಲಸ ಪೂರ್ಣಗೊಳಿಸಿ ಹಣ ಪಡೆದುಕೊಂಡು ಹೋಗಿದ್ದನು.
ಜುಲೈ ತಿಂಗಳಿನಲ್ಲಿ ದಂಪತಿ ತಮ್ಮ ಫ್ಲ್ಯಾಟ್ನ ಅಡುಗೆ ಕೋಣೆಯಲ್ಲಿದ್ದ ಓವನ್ (Oven) ಒಳಗೆ ಗುಲಾಬಿ ಬಣ್ಣದ (ಪಿಂಕ್) ಬ್ಯಾಗ್ನಲ್ಲಿ ಸುಮಾರು 136 ಗ್ರಾಂ ತೂಕದ ಚಿನ್ನಾಭರಣಗಳನ್ನು ಭದ್ರವಾಗಿ ಇರಿಸಿದ್ದರು. ಇದರಲ್ಲಿ ₹5 ಲಕ್ಷ ಮೌಲ್ಯದ 40 ಗ್ರಾಂ ಲಕ್ಷ್ಮೀ ಪೆಂಡೆಂಟ್ ಲಾಕೆಟ್, ₹5 ಲಕ್ಷ ಮೌಲ್ಯದ 40 ಗ್ರಾಂ ಕರಿಮಣಿ ಸರ, ₹1.40 ಲಕ್ಷ ಮೌಲ್ಯದ 14 ಗ್ರಾಂ ಚೈನ್, ₹80 ಸಾವಿರ ಮೌಲ್ಯದ 8 ಗ್ರಾಂ ಬ್ರೇಸ್ಲೆಟ್, ₹1 ಲಕ್ಷ ಮೌಲ್ಯದ 10 ಗ್ರಾಂ ತೂಕದ 3 ಉಂಗುರಗಳು ಹಾಗೂ ₹2.10 ಲಕ್ಷ ಮೌಲ್ಯದ 24 ಗ್ರಾಂ ತೂಕದ 2 ಚಿನ್ನದ ಬಳೆಗಳು ಸೇರಿದ್ದವು. ನವೆಂಬರ್ 9ರಂದು ಪತ್ನಿ ಶಾಂತಿ ಅವರು ಉಂಗುರವೊಂದನ್ನು ಕೇಳಿದಾಗ, ಬಿದ್ದಪ್ಪ ರಾಜಾ ಅವರು ಅಡುಗೆ ಕೋಣೆಯ ಓವನ್ನಲ್ಲಿ ಇಟ್ಟಿದ್ದ ಚಿನ್ನದ ಬ್ಯಾಗ್ ಹುಡುಕಿದ್ದಾರೆ. ಆದರೆ ಬ್ಯಾಗ್ ನಾಪತ್ತೆಯಾಗಿತ್ತು. ಮನೆಯ ಎಲ್ಲಾ ಕಡೆ ಹುಡುಕಾಡಿದರೂ ಆಭರಣಗಳು ಪತ್ತೆಯಾಗಲಿಲ್ಲ.
ಪೈಂಟಿಂಗ್ ಕೆಲಸಕ್ಕೆ ಬಂದಿದ್ದ ಇಬ್ಬರು ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ವಿಷಯವನ್ನು ಮಕ್ಕಳಿಗೆ ತಿಳಿಸಿ ಅವರ ಸಲಹೆಯಂತೆ ಮಾಜಿ ಸೈನಿಕರು ತಡವಾಗಿ ಬಂದು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.








