ಕಾಸರಗೋಡು: ನಿಷೇಧಿತ ಪ್ರಬಲ ಬೆಳಕಿನ ಮೀನುಗಾರಿಕೆ ನಡೆಸುತ್ತಿದ್ದ ಉಳ್ಳಾಲದ ಮೀನುಗಾರಿಕಾ ಬೋಟನ್ನು ಮಂಗಳವಾರ ರಾತ್ರಿ ಕಾಸರಗೋಡಿನಲ್ಲಿ ಮೀನುಗಾರಿಕಾ ಇಲಾಖೆ
ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಬೋಟಿನಲ್ಲಿ 10.000 ವ್ಯಾಟ್ ಸಾಮರ್ಥ್ಯದ ಪ್ರಬಲ ದೀಪಗಳನ್ನು ಪತ್ತೆಹಚ್ಚಲಾಗಿದ್ದು, ನಿಯಮ ಉಲ್ಲಂಘನೆಗಾಗಿ ಬೋಟಿನ ಮಾಲಕರಿಗೆ 2.5 ಲಕ್ಷ ರೂ. ದಂಡ
ವಿಧಿಸಲಾಗಿದೆ. ಮೀನುಗಾರಿಕ ಇಲಾಖೆ ಮತ್ತು ಮೆರೈನ್ ಎನ್‌ಫೋರ್ಸ್‌ಮೆಂಟ್ ವಿಭಾಗದ ಸಂಯುಕ್ತ ಗಸ್ತು ತಂಡವು ಮಂಗಳವಾರ ರಾತ್ರಿ ಸುಮಾರು 10 ಗಂಟೆಗೆ ಅಜೀತಲ
ಕರಾವಳಿಯಿಂದ 12 ನ್ಯಾಟಿಕಲ್ ಮೈಲು ವ್ಯಾಪ್ತಿಯೊಳಗೆ ಮೀನುಗಾರಿಕೆ ನಡೆಸುತ್ತಿದ್ದ ಉಳ್ಳಾಲದ ʼಬಲರಾಮ್ʼ ಹೆಸರಿನ ಟ್ರಲರ್ ಬೋಟನ್ನು ಪತ್ತೆಹಚ್ಚಿತು. 350
ಅಶ್ವಶಕ್ತಿ ಸಾಮರ್ಥ್ಯದ ಎಂಜಿನ್ ಹೊಂದಿದ್ದ ಈ ಬೋಟಿನಲ್ಲಿ ಮೀನುಗಳನ್ನು ಆಕರ್ಷಿಸಲು ತಲಾ 1,000 ವ್ಯಾಟ್‌ನ ಎಂಟು ದೀಪಗಳು ಹಾಗೂ 2,000 ವ್ಯಾಟ್‌ನ ಒಂದು ದೀಪ
ಸಹಿತ ಒಟ್ಟು 10,000 ವ್ಯಾಟ್ ಸಾಮರ್ಥ್ಯದ ದೀಪಗಳನ್ನು ಅಳವಡಿಸಲಾಗಿತ್ತು ಎಂದು ಪತ್ರಿಕಾ ಮೂಲಗಳು ಹೇಳಿವೆ.
ಇದಲ್ಲದೆ, ಬೋಟಿನ ಸಿಬ್ಬಂದಿ ಕೇರಳದ ಸಮುದ್ರ ವ್ಯಾಪ್ತಿಯನ್ನು ಪ್ರವೇಶಿಸಲು ಅನುಮತಿಯನ್ನೂ ಪಡೆದಿರಲಿಲ್ಲ. ವಶಪಡಿಸಿಕೊಂಡ ಬಲರಾಮ್ ಬೋಟನ್ನು ಮಡಕ್ಕರ
ಮೀನುಗಾರಿಕ ಜೆಟ್ಟಿಗೆ ತರಲಾಗಿದೆ. ಬೋಟ್‌ನಲ್ಲಿ ನಾಲ್ವರು ಸಿಬ್ಬಂದಿ ಇದ್ದರು. ಮೀನುಗಾರಿಕ ವಿಸ್ತರಣಾಧಿಕಾರಿ ಸಂಗೀತಾ ಎ. ಕೆ. ನೇತೃತ್ವದಲ್ಲಿ ಕಾರ್ಯಾಚರಣೆ
ನಡೆಸಲಾಯಿತು. ಮೀನುಗಾರಿಕ ಇಲಾಖೆಯ ಉಪನಿರ್ದೇಶಕಿ ಸಿ. ಕೆ. ಶೈನಿ ಅವರು ಬೋಟಿನ ಮಾಲಕರಿಗೆ ದಂಡ ವಿಧಿಸಿದರು ಎಂದು ತಿಳಿದು ಬಂದಿದೆ.








