ವಿಟ್ಲ: ವಿಟ್ಲ ಹೊರವಲಯದ ಪಡೀಬಾಗಿಲು ಸಮೀಪ ಸೋಮವಾರ ಬೆಳಿಗ್ಗೆ ಸಂಭವಿಸಿದ ಅಪಘಾತವೊಂದರಲ್ಲಿ ಚಲಿಸುತ್ತಿದ್ದ ಸ್ವಿಫ್ಟ್ ಕಾರಿನ ಮೇಲೆ ಬೃಹತ್ ಮರವೊಂದು ಹಾಗೂ ವಿದ್ಯುತ್ ಕಂಬ ಉರುಳಿಬಿದ್ದಿದೆ. ಘಟನೆಯ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ಹಾನಿಗೊಳಗಾದರೂ, ಅದರಲ್ಲಿದ್ದ ದಂಪತಿ ಯಾವುದೇ ಗಾಯಗಳಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾರೆ.
ಮಾಹಿತಿಯಂತೆ, ಕುದ್ದುಪದವು ಕಡೆಯಿಂದ ವಿಟ್ಲದತ್ತ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಪಡೀಬಾಗಿಲು ತಲುಪುತ್ತಿದ್ದ ವೇಳೆ ರಸ್ತೆ ಬದಿಯಲ್ಲಿದ್ದ ಬೃಹತ್ ಮರ ಏಕಾಏಕಿ ಉರುಳಿದೆ. ಮರ ಮೊದಲು ವಿದ್ಯುತ್ ತಂತಿ ಹಾಗೂ ಕಂಬದ ಮೇಲೆ ಬಿದ್ದ ಪರಿಣಾಮ, ಭಾರವನ್ನು ತಡೆಯಲಾಗದೆ ವಿದ್ಯುತ್ ಕಂಬವೂ ಕಿತ್ತು ಕಾರಿನ ಮುಂಭಾಗದ ಮೇಲೆ ಬಿದ್ದಿದೆ. ಇದರಿಂದ ಕಾರಿನ ಬಾನೆಟ್ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನಕ್ಕೆ ಭಾರೀ ಹಾನಿಯಾಗಿದೆ.
ಅಪಘಾತದ ಬಳಿಕ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಕೆಲಕಾಲ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಮರ ಹಾಗೂ ವಿದ್ಯುತ್ ಕಂಬ ರಸ್ತೆ ಮಧ್ಯೆ ಬಿದ್ದಿದ್ದರಿಂದ ಎರಡೂ ದಿಕ್ಕುಗಳಲ್ಲಿ ವಾಹನಗಳ ಉದ್ದ ಸಾಲು ನಿರ್ಮಾಣವಾಗಿತ್ತು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ವಿಟ್ಲ ಪೊಲೀಸರು ಮತ್ತು ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ಆರಂಭಿಸಿದರು. ಮರವನ್ನು ಕತ್ತರಿಸಿ, ವಿದ್ಯುತ್ ಕಂಬವನ್ನು ತೆರವುಗೊಳಿಸಿದ ಬಳಿಕ ಹೆದ್ದಾರಿಯನ್ನು ಮತ್ತೆ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.








