ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜದ ಬಾಡಿಗೆ ಮನೆಯೊಂದರಲ್ಲಿ ಎಲೆಕ್ಟ್ರಾನಿಕ್ ಯಂತ್ರಗಳನ್ನು ಬಳಸಿ ನಡೆಯುತ್ತಿದ್ದ ಖೋಟಾ ನೋಟು ದಂಧೆ ಪ್ರಕರಣದಲ್ಲಿ ಬಂಧಿತ ಎಳು ಆರೋಪಿಗಳ ಪೈಕಿ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ನಾಲ್ವರು ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಪಡೆದಿದ್ದು, ಉಳಿದ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪ್ರಕರಣದಲ್ಲಿ ಬಂಧಿತ ಎಲ್ಲ ಏಳು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದು, ಮಂಗಳವಾರ ಕಸ್ಟಡಿಯ ಅವಧಿ ಮುಗಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಪ್ರಕರಣದ ಪೊಲೀಸ್ ತನಿಖೆ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಕೇಳಿದ್ದರು. ಹೀಗಾಗಿ ನ್ಯಾಯಾಲಯ ನಾಲ್ವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಪುತ್ತೂರು ಬಪ್ಪಳಿಗೆ ನಿವಾಸಿ ಇಬ್ರಾಹಿಂ, ಉತ್ತರ ಕನ್ನಡ ಮೂಲದ ಸಂದೀಪ ಪುಂಡಲೀಕ ಶೋಳಂಬಿ, ಬೆಳ್ತಂಗಡಿ ಉರುವಾಲು ನಿನ್ನಿಕಲ್ಲು ನಿವಾಸಿ ಸಿರಾಜುದ್ದೀನ್, ಬೆಳ್ತಂಗಡಿ ಪುತ್ತಿಲ ನಿವಾಸಿ ಇರ್ಷಾದ್ ಅವರನ್ನು ಜು. 26ರ ವರೆಗೆ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಉಳಿದ ಆರೋಪಿಗಳಾದ ಕಾಸರಗೋಡು ಮೂಲದ ಶರೀಫ್, ಮಹಮ್ಮದ್ ನಬಾಸ್ ಹಾಗೂ ಪುತ್ತೂರು ಕುಂಬ್ರದ ಸಲ್ಮಾನ್ ಫಾರೀಸ್ ಅವರಿಗೆ ಆ. 1ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ ಪ್ರಕರಣದ ತನಿಖಾಧಿಕಾರಿ ಬೆಳ್ತಂಗಡಿ ಡಿವೈಎಸ್ಪಿ ಸಿ.ಕೆ. ರೋಹಿಣಿ ಉಪಸ್ಥಿತರಿದ್ದರು.








