ಬಂಟ್ವಾಳ: ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ವೃದ್ಧರೊಬ್ಬರು ವ್ಯಾಪಕ ಶೋಧದ ಬಳಿಕ ವಿಟ್ಲ ಪಡ್ನೂರು ಗ್ರಾಮದ ಕುಕ್ಕಿಲ ಪ್ರದೇಶದ ಅಡಿಕೆ ತೋಟದೊಳಗಿನ ನೀರಿನ ಚರಂಡಿಯಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಅಪಾಯದಿಂದ ಪಾರಾಗಿದ್ದಾರೆ.
ಕುಕ್ಕಿಲ ನಿವಾಸಿ ಗಿರಿಯಪ್ಪ ಸಪಲ್ಯ (75) ಅವರು ಮೂರು ದಿನಗಳ ಹಿಂದೆ ಕಾಣೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಕುಟುಂಬ ಸದಸ್ಯರು ವಿಟ್ಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಮಾಹಿತಿ ಪಡೆದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸಮೀಪದ ಕೆರೆ ಹಾಗೂ ಹೊಳೆಗಳಲ್ಲಿ ಅವರು ಬಿದ್ದಿರಬಹುದೆಂಬ ಅನುಮಾನದ ಮೇರೆಗೆ ಶೋಧ ಕಾರ್ಯಾಚರಣೆ ನಡೆಸಿದರು. ಆದರೆ ಹಲವು ಗಂಟೆಗಳ ಕಾಲ ನಡೆದ ಶೋಧದಲ್ಲಿಯೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಕುಟುಂಬಸ್ಥರು, ಕೊಡಪದವು ಮಾರುತಿ ಫ್ರೆಂಡ್ಸ್ ತಂಡದ ಸದಸ್ಯರು ಹಾಗೂ ಸ್ಥಳೀಯರು ಶುಕ್ರವಾರ ಬೆಳಗ್ಗೆ ಮತ್ತೊಮ್ಮೆ ಶೋಧ ಕಾರ್ಯ ಆರಂಭಿಸಿದರು. ಈ ವೇಳೆ ಕುಕ್ಕಿಲದ ಅಡಿಕೆ ತೋಟದೊಳಗೆ ಹರಿಯುವ ನೀರಿನ ಚರಂಡಿಯಲ್ಲಿ ಗಿರಿಯಪ್ಪ ಅವರು ಅಸ್ವಸ್ಥ ಹಾಗೂ ಅತಿ ಗಂಭೀರ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿತು.
ತಕ್ಷಣ ಸ್ಥಳೀಯರು ಅವರನ್ನು ಚರಂಡಿಯಿಂದ ಮೇಲಕ್ಕೆತ್ತಿ, ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಗಿರಿಯಪ್ಪ ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಇದೀಗ ಅಪಾಯದಿಂದ ಪಾರಾಗಿದ್ದಾರೆ.
ಈ ರಕ್ಷಣಾ ಕಾರ್ಯಾಚರಣೆಗೆ ಕೋಡಪದವು ಮಾರುತಿ ಫ್ರೆಂಡ್ಸ್ ತಂಡದ ಮನೋಹರ್ ನೇತೃತ್ವ ವಹಿಸಿದ್ದರು. ಜಿಲ್ಲಾ ಬಿಜೆಪಿ ವಕ್ತಾರ ಮಾಧವ ಮಾವೆ, ಮಣಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರವಿಂದ ರೈ, ರೈತ ಮೋರ್ಚಾ ಅಧ್ಯಕ್ಷ ಉಮೇಶ್ ಶೆಟ್ಟಿ, ಸ್ವಯಂಸೇವಕರಾದ ಸೀತಾರಾಮ ಗೌಡ, ಮುರಳಿ ಭಟ್, ಮನೋಹರ್ ಕುಕ್ಕಿಲ ಹಾಗೂ ಸ್ಥಳೀಯ ನಿವಾಸಿಗಳು ಸಕ್ರಿಯವಾಗಿ ಸಹಕರಿಸಿದರು.








