ಚೆನ್ನೈ: ಖ್ಯಾತ ನಟಿ ತ್ರಿಶಾ ಕುರಿತು ವಿವಾದಾತ್ಮಕ ಹಾಗೂ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ತಮಿಳುನಾಡು ಪೊಲೀಸರು ಮಂಗಳವಾರ ಚೆನ್ನೈನ ನೀಲಾಂಕರೈನಲ್ಲಿರುವ ಅವರ ನಿವಾಸದಿಂದ ವಶಕ್ಕೆ ಪಡೆದುಕೊಂಡಿದ್ದಾರೆ.
ಕಾವೇರಿ ವಿಚಾರವಾಗಿ ತಂಜಾವೂರಿನಲ್ಲಿ ನಡೆದ ರೈತರ ಪ್ರತಿಭಟನಾ ಸಭೆಯಲ್ಲಿ ಉದಯನಿಧಿ ಅವರು ಮಾತನಾಡುತ್ತಿದ್ದರು. ಈ ವೇಳೆ ಜನಸಮೂಹದಲ್ಲಿದ್ದ ವ್ಯಕ್ತಿಯೊಬ್ಬರು ನಟಿಯ ಹೆಸರನ್ನು ಪ್ರಸ್ತಾಪಿಸಿದಾಗ, ಅದಕ್ಕೆ ಪ್ರತಿಕ್ರಿಯಿಸಿದ ಉದಯನಿಧಿ ದ್ವಂದ್ವಾರ್ಥದಲ್ಲಿ ಹೇಳಿಕೆ ನೀಡಿದ್ದರು ಎನ್ನಲಾದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಈ ಕುರಿತು ತಮಿಳಗ ವೆಟ್ರಿ ಕಳಗಂ (TVK) ಮಹಿಳಾ ಘಟಕ ನೀಡಿದ ದೂರಿನ ಆಧಾರದ ಮೇಲೆ ಉದಯನಿಧಿ ವಿರುದ್ಧ ವಿವಿಧ ಠಾಣೆಗಳಲ್ಲಿ 6 ಎಫ್ಐಆರ್ಗಳು ದಾಖಲಾಗಿವೆ.
ಪೊಲೀಸ್ ವಶಕ್ಕೆ ಒಳಗಾಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಉದಯನಿಧಿ, “ಇದು ಸರ್ಕಾರದ ಕಾಮಿಡಿ. ರೈತರ ಗಂಭೀರ ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ ಸರ್ಕಾರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದೆ,” ಎಂದು ವೀರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆ ಉದಯನಿಧಿ ಪರವಾಗಿ ಡಿಎಂಕೆ ನಾಯಕರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇತ್ತ ಟಿವಿಕೆ ರಾಷ್ಟ್ರೀಯ ವಕ್ತಾರ ಪಳಾ ಸೆಲ್ವಕುಮಾರ್ ಅವರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (NCW) ದೂರು ಸಲ್ಲಿಸಿ ಉದಯನಿಧಿ ವಿರುದ್ಧ ಬಿಎನ್ಎಸ್ (BNS) ಕಾಯ್ದೆಯಡಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಿಜೆಪಿಯೂ ಈ ಹೇಳಿಕೆಯನ್ನು ಖಂಡಿಸಿದೆ.








