ಮಂಗಳೂರು: ಕಿರಿಯ ವಿದ್ಯಾರ್ಥಿಗಳ ಮೇಲೆ ‘ಡ್ರೆಸ್ ಕೋಡ್’ ಹೇರಲು ಯತ್ನಿಸಿ, ಶೂ ಧರಿಸಿದ್ದಕ್ಕಾಗಿ ಪ್ರಥಮ ವರ್ಷದ ಇಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ರ್ಯಾಗಿಂಗ್ ಎಸಗಿದ್ದ ದ್ವಿತೀಯ ವರ್ಷದ ಐವರು ವಿದ್ಯಾರ್ಥಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ನಗರದ ಗುಜ್ಜರಕೆರೆಯ ಚಹಾ ಅಂಗಡಿಯೊಂದರ ಬಳಿ ಈ ಘಟನೆ ನಡೆದಿದೆ. ಪ್ರಥಮ ವರ್ಷದ ಇಬ್ಬರು ವಿದ್ಯಾರ್ಥಿಗಳು ಶೂ ಧರಿಸಿ ಬಂದಿದ್ದರೆಂಬ ಕಾರಣಕ್ಕೆ ಅದೇ ಕಾಲೇಜಿನ ದ್ವಿತೀಯ ವರ್ಷದ ಆರು ಮಂದಿ ವಿದ್ಯಾರ್ಥಿಗಳ ಗುಂಪು ಅವರ ಮೇಲೆ ಏಕಾಏಕಿ ದಾಳಿ ನಡೆಸಿ ಹಲ್ಲೆ ನಡೆಸಿದೆ. ಬಂಧಿತರು ಹಾಗೂ ಗಾಯಾಳುಗಳಿಬ್ಬರೂ ಮೂಲತಃ ಕೇರಳ ರಾಜ್ಯದ ವಿದ್ಯಾರ್ಥಿಗಳಾಗಿದ್ದು, ಗಾಯಗೊಂಡ ಜೂನಿಯರ್ ವಿಧ್ಯಾರ್ಥಿಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಕುರಿತು ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, “ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳ ಮೇಲೆ ಬಲವಂತವಾಗಿ ಡ್ರೆಸ್ ಕೋಡ್ ಹೇರಲು ಯತ್ನಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಹಲ್ಲೆಯಲ್ಲಿ ಪಾಲ್ಗೊಂಡ ಆರು ಮಂದಿಯ ಪೈಕಿ ಐವರನ್ನು ಗಾಯಾಳು ವಿದ್ಯಾರ್ಥಿಗಳು ಗುರುತಿಸಿದ್ದು, ಆ ಐವರನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಹಲ್ಲೆ ಕಲಂಗಳು ಹಾಗೂ ಕಟ್ಟುನಿಟ್ಟಿನ ‘ಕರ್ನಾಟಕ ರ್ಯಾಗಿಂಗ್ ಪ್ರತಿಷೇಧ ಕಾಯಿದೆ’ಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ,” ಎಂದು ತಿಳಿಸಿದ್ದಾರೆ.








