ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮದ್ಯದೊಂದಿಗೆ ಆಹಾರ ಪೂರೈಸುವ ಪ್ರಮುಖ ಬಾರ್ ಹಾಗೂ ರೆಸ್ಟೋರೆಂಟ್‌ಗಳ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡ ಬುಧವಾರ ರಾತ್ರಿ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಐಡಿ ಕಾರ್ಡ್ ಪರಿಶೀಲನೆ – ಕಟ್ಟುನಿಟ್ಟಿನ ಸೂಚನೆ:
ದಾಳಿಯ ವೇಳೆ ಬಾರ್‌ಗಳಿಗೆ ಆಗಮಿಸಿದ್ದ ಗ್ರಾಹಕರ ಗುರುತಿನ ಚೀಟಿಗಳನ್ನು ಅಧಿಕಾರಿಗಳು ತಪಾಸಣೆಗೊಳಪಡಿಸಿದರು. ಯಾವುದೇ ಕಾರಣಕ್ಕೂ ಅಪ್ರಾಪ್ತ ವಯಸ್ಕರಿಗೆ ಮದ್ಯ ಪೂರೈಸಬಾರದು ಎಂದು ಸನ್ನದುದಾರರಿಗೆ (Bar Licensees) ಸ್ಪಷ್ಟ ನಿರ್ದೇಶನ ನೀಡಲಾಯಿತು. ನಿಯಮ ಉಲ್ಲಂಘಿಸಿ ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡುವುದು ಕಂಡುಬಂದಲ್ಲಿ ಸನ್ನದು ರದ್ದುಗೊಳಿಸುವುದು ಸೇರಿದಂತೆ ಕಾನೂನುಬದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ನಿರ್ದೇಶನದಂತೆ ದಾಳಿಯಲ್ಲಿ ಮಂಗಳೂರು ಉಪವಿಭಾಗ 1 ರ ಉಪ ಅಧೀಕ್ಷಕಿ ಗಾಯತ್ರಿ ಸಿ ಹೆಚ್ ಅವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ಚೇತನ್ ಕುಮಾರ್, ಪ್ರತಿಭಾ, ಮಿಲ್ಲರ್ ಜಾನ್ಸನ್ ಡಿಸೋಜ, ಕಮಲ, ದತ್ತಗುರು, ಉಪನಿರೀಕ್ಷಕರಾದ ರಜಾಕ್, ಜಯಪ್ಪ ಹಾಗೂ ಪೇದೆಗಳಾದ ಸಂದೀಪ್, ಸಂಧ್ಯಾ, ಶಿವಲಿಂಗಪ್ಪ, ಆನಂದ್, ಮಂಜಪ್ಪ, ದೇವರಾಜ್ ಪಾಲ್ಗೊಂಡಿದ್ದರು








