ಬೆಂಗಳೂರು : ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿರುವುದು ಭಾರೀ ಸಂಚಲನ ಮೂಡಿಸಿದೆ.
ಸಿಸಿಬಿ ಅಧಿಕಾರಿಗಳು ಮಂಗಳವಾರ ನಡೆಸಿದ ದಿಢೀರ್ ಶೋಧ ಕಾರ್ಯಾಚರಣೆ ವೇಳೆ ಈ ಅಕ್ರಮ ಬೆಳಕಿಗೆ ಬಂದಿದೆ. ಸಿಸಿಬಿ ದಿಢೀರ್ ಪರಿಶೀಲನೆ:ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಜಯ್ ಹಿಲೋರಿ, ಡಿಸಿಪಿಗಳಾದ ಶ್ರೀಹರಿಬಾಬು, ರಾಜಾ ಇಮಾಮ್ ಕಾಸಿಂ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ಮಂಗಳವಾರ ಜೈಲು ಸಂಕೀರ್ಣದ ಮೇಲೆ ದಿಢೀರ್ ದಾಳಿ ನಡೆಸಿತ್ತು. ಬೆಳಗ್ಗಿನಿಂದ ರಾತ್ರಿಯವರೆಗೆ ನಡೆದ ಪರಿಶೀಲನೆ ವೇಳೆ, ವಿಐಪಿ ಸಜಾ ಕೈದಿ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್ನಲ್ಲಿ ಮೊಬೈಲ್ ಫೋನ್ ಜಪ್ತಿಯಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್, ಎ-14 ಪ್ರದೋಶ್ ಸೇರಿದಂತೆ ಇತರ ಪ್ರಮುಖ ಕೈದಿಗಳ ಬ್ಯಾರಕ್ಗಳಲ್ಲೂ ಸಿಸಿಬಿ ಶೋಧ ನಡೆಸಿದೆ. ಆದರೆ ದರ್ಶನ್ ಬ್ಯಾರಕ್ನಲ್ಲಿ ಯಾವುದೇ ಅಕ್ರಮ ವಸ್ತು ಅಥವಾ ಮೊಬೈಲ್ ಪತ್ತೆಯಾಗಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.








