ಹೆಬ್ರಿ: ಶಿವಪುರ ಗ್ರಾಮ ಪಂಚಾಯತ್‌ನಲ್ಲಿ ವಸೂಲಾದ ಲಕ್ಷಾಂತರ ರೂಪಾಯಿ ಮನೆ ತೆರಿಗೆ ಹಣವನ್ನು ಪಂಚಾಯತ್ ಬ್ಯಾಂಕ್ ಖಾತೆಗೆ ಜಮಾ ಮಾಡದೆ ಸ್ವಂತಕ್ಕೆ ಬಳಸಿಕೊಂಡು ಸರ್ಕಾರದ ಹಣ ದುರ್ಬಳಕೆ ಮಾಡಿದ ಆರೋಪದ ಮೇಲೆ ಪಂಚಾಯತ್ ಬಿಲ್ಲು ವಸೂಲಿಗನ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಪುರ ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ ಬಿಲ್ಲು ವಸೂಲಿಗ ಮಂಜುನಾಥ್ (40) ಆರೋಪ ಎದುರಿಸುತ್ತಿರುವ ವ್ಯಕ್ತಿ.
ಶಿವಪುರ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ (PDO) ಅಶೋಕ್ (42) ಅವರು ಈ ಕುರಿತು ಹೆಬ್ರಿ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಮಂಜುನಾಥ್ 2023-24ನೇ ಸಾಲಿನಲ್ಲಿ ಮನೆ ತೆರಿಗೆಯಾಗಿ ವಸೂಲಿ ಮಾಡಿದ ₹1,18,367 ಹಾಗೂ 2024-25ನೇ ಸಾಲಿನಲ್ಲಿ ವಸೂಲಾದ ₹3,36,021 ಸೇರಿದಂತೆ ಒಟ್ಟು ₹4,54,388 ಹಣವನ್ನು ನಿಯಮಾನುಸಾರ ಗ್ರಾಮ ಪಂಚಾಯತ್‌ನ ಅಧಿಕೃತ ಬ್ಯಾಂಕ್ ಖಾತೆಗೆ ಜಮಾ ಮಾಡಿರಲಿಲ್ಲ.
ಈ ತೆರಿಗೆ ಹಣವನ್ನು ತನ್ನ ಸ್ವಂತ ಬಳಕೆಗಾಗಿ ಉಪಯೋಗಿಸಿಕೊಂಡು, ಪಂಚಾಯತ್‌ಗೆ ನಂಬಿಕೆ ದ್ರೋಹ ಹಾಗೂ ವಂಚನೆ ಎಸಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಪಿಡಿಒ ಅಶೋಕ್ ನೀಡಿದ ದೂರಿನನ್ವಯ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 38/2026ರಲ್ಲಿ ಬಿಎನ್‌ಎಸ್ (BNS) ಕಾಯ್ದೆಯ ಕಲಂ 316(4), 318(2), 314 ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕಲಂ 13ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.








