ಚೆನ್ನೈ:ತಿರುವೊಟ್ಟಿಯೂರ್ನಲ್ಲಿ ಶುಕ್ರವಾರ ಸಂಜೆ ಶಾಲೆಯ ಹಿಂಭಾಗದ ಖಾಲಿ ಜಾಗದಲ್ಲಿ ತನ್ನದೇ ಶಾಲೆಯ ವಿದ್ಯಾರ್ಥಿಗಳ ಗುಂಪೊಂದು ಹಲ್ಲೆ ನಡೆಸಿದ ಪರಿಣಾಮ 12ನೇ ತರಗತಿಯ 16 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ತಿರುವೊಟ್ಟಿಯೂರ್ ಪೊಲೀಸರು ತನಿಖೆ ನಡೆಸುತ್ತಿದ್ದು, ಎರಡು ದಿನಗಳ ಹಿಂದೆ ಇಬ್ಬರು ವಿದ್ಯಾರ್ಥಿಗಳ ನಡುವೆ ನಡೆದಿದ್ದ ಜಗಳವೇ ಘಟನೆಗೆ ಕಾರಣವಾಗಿರಬಹುದು ಎಂದು ಶಂಕಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 11ನೇ ತರಗತಿಯ 16 ವರ್ಷದ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದು, 10ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಶುಕ್ರವಾರ ಮೃತ ವಿದ್ಯಾರ್ಥಿಯ ಆಪ್ತ ಸ್ನೇಹಿತ ಶಾಲೆಗೆ ಗೈರಾಗಿದ್ದ. ಸಂಜೆ 4.15ರ ಸುಮಾರಿಗೆ ಶಾಲಾ ಅವಧಿ ಮುಗಿದ ಬಳಿಕ ಆರೋಪಿತ ವಿದ್ಯಾರ್ಥಿ ಹಾಗೂ ಆತನ ಸ್ನೇಹಿತರು ಶಾಲೆಯ ಹಿಂಭಾಗದ ಖಾಲಿ ಜಾಗದಲ್ಲಿ ಮೃತ ವಿದ್ಯಾರ್ಥಿಯನ್ನು ಸುತ್ತುವರಿದಿದ್ದಾರೆ. ಬಳಿಕ 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಗುಂಪು ವಿದ್ಯಾರ್ಥಿಯ ಮೇಲೆ ಸರಣಿ ಹಲ್ಲೆ ನಡೆಸಿದೆ.
ಹಲ್ಲೆಯಿಂದ ವಿದ್ಯಾರ್ಥಿ ನೆಲಕ್ಕೆ ಕುಸಿದ ಬಳಿಕ ಸೆಳವು ಕಾಣಿಸಿಕೊಂಡಿದೆ. ನಂತರ ವಿದ್ಯಾರ್ಥಿಗಳ ಗುಂಪು ಅಲ್ಲಿಂದ ಪರಾರಿಯಾಗಿದೆ. ಗದ್ದಲ ಕೇಳಿ ಸ್ಥಳಕ್ಕೆ ತೆರಳಿದ ದಾರಿಹೋಕರು ವಿದ್ಯಾರ್ಥಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವಿದ್ಯಾರ್ಥಿಯನ್ನು ಸರ್ಕಾರಿ ಸ್ಟ್ಯಾನ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಮೃತ ವಿದ್ಯಾರ್ಥಿ 10ನೇ ತರಗತಿಯಲ್ಲಿ ಅನುತ್ತೀರ್ಣನಾಗಿದ್ದ ಬಳಿಕ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಮತ್ತೆ ಶಾಲೆಗೆ ಸೇರಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲೆಯಲ್ಲಿ ಯಾರು ಹಿರಿಯರು ಎಂಬ ವಿಚಾರವಾಗಿ ಮೃತ ವಿದ್ಯಾರ್ಥಿಯ ಆಪ್ತ ಸ್ನೇಹಿತ ಹಾಗೂ ಆರೋಪಿತ ವಿದ್ಯಾರ್ಥಿಯ ನಡುವೆ ಈ ವಾರದ ಆರಂಭದಲ್ಲಿ ಜಗಳ ನಡೆದಿತ್ತು ಎನ್ನಲಾಗಿದೆ.
ಮೃತ ವಿದ್ಯಾರ್ಥಿಯ ದೇಹದ ಮೇಲೆ ಹೊರಗಿನಿಂದ ಕಾಣುವ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, 10ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ.








