ಬೆಂಗಳೂರು: ನಿತ್ಯ ಕುಡಿದು ಬಂದು ತಾಯಿಗೆ ಕಿರುಕುಳ ನೀಡುತ್ತಿದ್ದ ತಂದೆಯನ್ನು ಮಗನೇ ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ಶಿವಪುರದಲ್ಲಿ ನಡೆದಿದೆ.
ಪತ್ನಿ ಮೇಲಿನ ಹಲ್ಲೆ ತಡೆಯಲು ಹೋಗಿ ದುರಂತ
ಶ್ರೀಧರ್ ಮೂರ್ತಿ ಅವರು ತಮ್ಮ ಮೂವರು ಮಕ್ಕಳೊಂದಿಗೆ ಶಿವಪುರದಲ್ಲಿ ವಾಸವಾಗಿದ್ದರು. ಅವರು ಪ್ರತಿದಿನ ಮದ್ಯಪಾನ ಮಾಡಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರೆನ್ನಲಾಗಿದೆ. ಮಂಗಳವಾರವೂ ಗಲಾಟೆ ತೆಗೆದು ಪತ್ನಿಯ ಮೇಲೆ ಕತ್ತರಿಯಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ತಾಯಿಯ ರಕ್ಷಣೆಗೆ ಬಂದ ಎರಡನೇ ಮಗ ಉದಯ್, ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಪೆಟ್ಟು ಬಿದ್ದ ಪರಿಣಾಮ ಶ್ರೀಧರ್ ಮೂರ್ತಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಆರೋಪಿ ಮಗನ ಬಂಧನ
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಂದೆಯನ್ನು ಹತ್ಯೆ ಮಾಡಿದ ಆರೋಪಿ ಮಗ ಉದಯ್‌ನನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.








