ಬೆಂಗಳೂರು: ಬೃಹತ್ ನಕಲಿ ಔಷಧಿ ಜಾಲ ಪತ್ತೆಯಾದ ಪ್ರಕರಣ ಸಂಬಂಧ, ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ನಕಲಿ ಔಷಧಿಗಳನ್ನು ಮಾರಾಟ ಮಾಡುತ್ತಿದ್ದ ಕಿಂಗ್‌ಪಿನ್ ಪ್ರಶಾಂತ್‌ಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಆತ ಇದುವರೆಗೂ 40,000ಕ್ಕೂ ಹೆಚ್ಚು ನಕಲಿ ಕ್ಯಾನ್ಸರ್ ಔಷಧ ಬಾಟಲಿಗಳನ್ನು ಮಾರಾಟ ಮಾಡಿರುವ ಅಂದಾಜಿದೆ. ಈ ಪ್ರಕರಣದ ಗಂಭೀರತೆ ಅರಿತು ರಾಜ್ಯ ಸರ್ಕಾರವು ಹಿರಿಯ ಐಪಿಎಸ್ ಅಧಿಕಾರಿ ವಂಶಿಕೃಷ್ಣ ನೇತೃತ್ವದಲ್ಲಿ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿದೆ. ಪ್ರಶಾಂತ್‌ನ ಪತ್ನಿ ಮತ್ತು ಸಂಬಂಧಿಕರನ್ನು ವಿಚಾರಣೆ ನಡೆಸಲಾಗಿದ್ದು, ಆತ ವಿದೇಶದಲ್ಲಿದ್ದಾನೆ ಎಂದು ಪತ್ನಿ ಹೇಳಿದ್ದಾರೆ. ಆದರೆ, ಭಾರತದಲ್ಲೇ ಇರುವ ಬಗ್ಗೆ ಪೊಲೀಸರಿಗೆ ಅನುಮಾನವಿದೆ. ಆರೋಪಿಯ ಪತ್ತೆಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ರಾಮನಗರದ ತೋಟದ ಮನೆಯಲ್ಲಿ ನಕಲಿ ಔಷಧಿಗಳನ್ನು ತಯಾರಿಸಿ, ಅಮೆರಿಕಾ ಮೂಲದ ಕಂಪನಿಗಳ ಲೇಬಲ್ ಹಚ್ಚಿ ಮಾರಾಟ ಮಾಡುತ್ತಿದ್ದರು. ಈಗಾಗಲೇ ನಾಲ್ಕು ಜನ ಆರೋಪಿಗಳನ್ನು ಬಂಧಿಸಲಾಗಿದೆ.








