ಕಡಬ: ಹಣದ ಆಮಿಷವೊಡ್ಡಿ ಸಾರ್ವಜನಿಕರನ್ನು ಸೇರಿಸಿ ನಿಷೇಧಿತ ಸ್ಕೀಮ್ ಬಗ್ಗೆ ಸಭೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಕಡಬ ಪೊಲೀಸರು, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಕಡಬ ಠಾಣಾ ವ್ಯಾಪ್ತಿಯ ಅಂಬೇಡ್ಕರ್ ಭವನ ಎಂಬಲ್ಲಿ, ಹಾವೇರಿ ಮೂಲದ ಕಿಂಗ್ಸ್ ಬಜಾರ್ ಎಂಬ ಸಂಸ್ಥೆಯ ಹೆಸರಿನಲ್ಲಿ ಸಾರ್ವಜನಿಕರಿಗೆ ಶೀಘ್ರವಾಗಿ ಹಣಗಳಿಸಬಹುದಾಗಿ, ಹೆಚ್ಚಿನ ಬೆಲೆಯ ವಸ್ತುಗಳನ್ನು ಕಡಿಮೆ ದರದಲ್ಲಿ ಪಡೆಯಬಹುದು ಹಾಗೂ ಜನರನ್ನು ಯೋಜನೆಗೆ ಸೇರಿಸಿದಲ್ಲಿ ಕಮಿಷನ್ ಹಣ ಸಂಪಾದಿಸಬಹುದಾಗಿ ಭರವಸೆ ನೀಡಿ, ಅಕ್ರಮವಾಗಿ ನಿಷೇಧಿತ ಹಣಪರಿಚಲನೆ ಯೋಜನೆ ನಡೆಸಿ ಹಣವನ್ನು ಸ್ವೀಕರಿಸುವ ಯೋಜನೆ ನಡೆಸುತ್ತಿರುವುದು ಮಾಹಿತಿ ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಕಿಂಗ್ಸ್ ಬಜಾರ್ ಸಂಸ್ಥೆ, ಸಂಸ್ಥೆಯ ಮಾಲಿಕರು ಮತ್ತು ಯೋಜನೆಯನ್ನು ಸ್ಥಳೀಯವಾಗಿ ನಡೆಸುತ್ತಿದ್ದ ಬೆಳ್ತಂಗಡಿ ಕೊಕ್ಕಡ ನಿವಾಸಿಗಳಾದ ಸುಬ್ರಹ್ಮಣ್ಯ ಶಗ್ರಿತ್ತಾಯ (50) ಗುರುಮೂರ್ತಿ (54), ಕಡಬ ಬಿಳಿನೆಲೆ ನಿವಾಸಿಗಳಾದ ಸುರೇಶ್ ಆರ್ ಎಸ್ (55), ಕಿರಣ ಕುಮಾರ್ (21) ಶ್ರೀನಾಥ್ (48), ಕಡಬ ಕೌಕ್ರಾಡಿ ನಿವಾಸಿ ಬಾಲಕೃಷ್ಣ ಪಿ ಹೆಚ್ (42), ಪುತ್ತೂರು ನಿವಾಸಿ ಸಂದೇಶ್ ಎಂಬವರುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅದರಂತೆ ಕಡಬ ಪೊಲೀಸ್ ಠಾಣಾ ಅ.ಕ್ರ: 100/2026, ಕಲಂ. 4, 5, 6 PRIZE CHIT & MONEY CIR.SCHEMES (BANNING) ACT, 1978 ರಂತೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.








