ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಅಧಿಕಾರಿಗಳು ವಿದೇಶದಿಂದ ಬಂದ ಪ್ರಯಾಣಿಕನ ಬಾಯಿಯಲ್ಲಿ ಬಚ್ಚಿಟ್ಟಿದ್ದ ಸುಮಾರು 82 ಗ್ರಾಂ ತೂಕದ ಎರಡು ಚಿನ್ನದ ಕ್ಯಾಪ್ಸುಲ್‌ಗಳನ್ನು ಪತ್ತೆಹಚ್ಚಿದ್ದಾರೆ. ದುಬೈನಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕನ ವರ್ತನೆ ಭದ್ರತಾ ತಪಾಸಣೆ ವೇಳೆ ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಹೆಚ್ಚಿನ ತಪಾಸಣೆ ನಡೆಸಲಾಗಿದ್ದು, ಈ ವೇಳೆ ಆತನ ಬಾಯಿಯೊಳಗೆ ಕ್ಯಾಪ್ಸುಲ್‌ಗಳನ್ನು ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಬಳಿಕ ಪ್ರಯಾಣಿಕನನ್ನು ವಶಕ್ಕೆ ಪಡೆದು, ವಶಪಡಿಸಿಕೊಂಡ ವಸ್ತುಗಳೊಂದಿಗೆ ಹೆಚ್ಚಿನ ಕಾನೂನು ಕ್ರಮಕ್ಕಾಗಿ ವಿಮಾನ ನಿಲ್ದಾಣ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ವಶಪಡಿಸಿಕೊಂಡ ಲೋಹದ ನಿಖರ ಸ್ವರೂಪ ಮತ್ತು ಮೌಲ್ಯವನ್ನು ಪರಿಶೀಲಿಸಲಾಗುತ್ತಿದೆ.








