ಜನಪ್ರಿಯ ಗಾಯಕ ಮತ್ತು ಯೂಟ್ಯೂಬರ್ 35 ವರ್ಷದ ಅಂಕಿತ್ ಬಲಿಯಾನ್ ಅವರನ್ನು ಜಿಮ್ನ ಹೊರಗಡೆ ಬುಧವಾರ ಸಂಜೆ ನಾಲ್ವರು ದುಷ್ಕರ್ಮಿಗಳು ಭೀಕರವಾಗಿ ಗುಂಡಿಕ್ಕಿ ಕೊಲೆ ಮಾಡಿದ್ದಾರೆ.
ಸಂಜೆ ಸುಮಾರು 7 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಜಿಮ್ ಮುಗಿಸಿ ಹೊರಬಂದ ಅಂಕಿತ್ ಬಲಿಯಾನ್ ತಮ್ಮ ಕಾರಿನ ಬಳಿಗೆ ತೆರಳುತ್ತಿದ್ದಾಗ ದಾಳಿಕೋರರು ದಿಢೀರ್ ದಾಳಿ ನಡೆಸಿ ಸುಮಾರು 20 ಸುತ್ತು ಗುಂಡು ಹಾರಿಸಿದ್ದಾರೆ. ತಲೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗುಂಡೇಟು ತಗುಲಿ ಅಂಕಿತ್ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಕೊಲೆಯ ಜವಾಬ್ದಾರಿಯನ್ನು ‘ಗೋಗಿ ಗ್ಯಾಂಗ್’ ಹೊತ್ತುಕೊಂಡಿದೆ. ಗಾಯಕ ಅಂಕಿತ್ ತಮ್ಮ ಶತ್ರುಗಳೊಂದಿಗೆ ಸಂಪರ್ಕದಲ್ಲಿದ್ದ ಹಾಗೂ ಗ್ಯಾಂಗ್ಗೆ ಸಂಬಂಧಿಸಿದ ಘಟನೆಯ ಕುರಿತು ಹಾಡನ್ನು ರಚಿಸಿದ್ದ ಎಂದು ಗ್ಯಾಂಗ್ನ ಸದಸ್ಯ ಭೋಲು ಶಹಪುರಿಯಾ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಯುಪಿ ಪೊಲೀಸರಿಗೆ ಬೆದರಿಕೆ ಹಾಕಿ ಮುಂಬರುವ ದಿನಗಳಲ್ಲಿ ಇಂತಹ ಇನ್ನಷ್ಟು ಘಟನೆಗಳು ನಡೆಯಲಿವೆ ಎಂದು ಎಚ್ಚರಿಕೆ ನೀಡಿದ್ದಾನೆ.
ಭಾರಿ ಕೋರ್ಟ್ ಮೇ ಗೋಲಿ ಮಾರೇಂಗೆ ಮೇರಿ ಜಾನ್’ ಎಂಬ ಪ್ರಸಿದ್ಧ ಗೀತೆಯ ಮೂಲಕ ಜನಪ್ರಿಯರಾಗಿದ್ದ ಶಾಮ್ಲಿಯ ಬಂಟಿಖೇರಾ ಗ್ರಾಮದ ಅಂಕಿತ್ ಬಲಿಯಾನ್ ಹತ್ಯೆಯನ್ನು ಖಂಡಿಸಿ ಕುಟುಂಬಸ್ಥರು ಹಾಗೂ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಮೃತದೇಹವನ್ನು ರಸ್ತೆಯಲ್ಲೇ ಇಟ್ಟು ದೆಹಲಿ-ಮುಜಾಫರ್ನಗರ ರಸ್ತೆಯನ್ನು ತಡೆದು ಕೊಲೆಗಾರರ ಬಂಧನಕ್ಕೆ ಆಗ್ರಹಿಸಿದ್ದಾರೆ. ಪೊಲೀಸರು ಹಳೆಯ ವೈಷಮ್ಯ ಹಾಗೂ ಮುಂಬರುವ ಪಂಚಾಯತ್ ಚುನಾವಣೆ ಸೇರಿದಂತೆ ಎಲ್ಲಾ ಕೋನಗಳಿಂದ ತನಿಖೆ ಚುರುಕುಗೊಳಿಸಿದ್ದಾರೆ








