ಬೆಂಗಳೂರು; ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಕುರಿತು ವಿಮರ್ಶೆ (Review) ಪ್ರಕಟಿಸಿದ್ದ ಯೂಟ್ಯೂಬರ್ ಸೂರಜ್ ಕುಮಾರ್ ಅವರಿಗೆ ಚಿತ್ರತಂಡದಿಂದ ಲೀಗಲ್ ನೋಟಿಸ್ ನೀಡಿದೆ.
ಈ ಕುರಿತು ಸೂರಜ್ ಅವರು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ನೋಟಿಸ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದು, ಸದ್ಯ ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ.ಬೆಂಗಳೂರು ಮೂಲದ ಐಪ್ಲೆಕ್ಸ್ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು, ‘ಟಾಕ್ಸಿಕ್’ ಚಿತ್ರದ ನಿರ್ಮಾಪಕರಾದ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಎಲ್‌ಎಲ್‌ಪಿ ಪರವಾಗಿ ಈ ನೋಟಿಸ್ ನೀಡಿದೆ. ‘ಟಾಕ್ಸಿಕ್’ ಚಿತ್ರಕ್ಕೆ ಸಂಬಂಧಿಸಿದ ವಿಷಯವನ್ನು ಡಿಜಿಟಲ್ ಹಾಗೂ ಆನ್‌ಲೈನ್ ವೇದಿಕೆಗಳಲ್ಲಿ ಹಂಚಿಕೊಂಡಿರುವುದು ಗಮನಕ್ಕೆ ಬಂದಿದೆ. ನಿರ್ಮಾಪಕರ ಪರವಾಗಿ ಕಾಪಿರೈಟ್ ಉಲ್ಲಂಘನೆ, ಸುಳ್ಳು ಅಥವಾ ನಿಂದನಾತ್ಮಕ ವಿಷಯಗಳ ವಿರುದ್ಧ ಕ್ರಮ ಕೈಗೊಳ್ಳಲು ಐಪ್ಲೆಕ್ಸ್ ಸಂಸ್ಥೆಗೆ ಅಧಿಕಾರ ನೀಡಲಾಗಿದೆ.
ಅಗತ್ಯವಿದ್ದಲ್ಲಿ ವಿಡಿಯೊವನ್ನು ಆನ್‌ಲೈನ್‌ನಿಂದ ತೆಗೆದುಹಾಕಲು, ನಿರ್ಬಂಧಿಸಲು ಅಥವಾ ಡಿ-ಇಂಡೆಕ್ಸಿಂಗ್ ಮಾಡಲು ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಲೀಗಲ್ ನೋಟಿಸ್ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಯೂಟ್ಯೂಬರ್ ಸೂರಜ್ ಕುಮಾರ್, “ನನ್ನ ರಿವ್ಯೂಗೆ ಲೀಗಲ್ ನೋಟಿಸ್ ನೀಡಿದ್ದಕ್ಕಾಗಿ ‘ಟಾಕ್ಸಿಕ್’ ಚಿತ್ರತಂಡಕ್ಕೆ ಧನ್ಯವಾದಗಳು” ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. ಸಿನಿಮಾಗಳ ವಿಮರ್ಶೆ ಮಾಡುವ ಯೂಟ್ಯೂಬರ್‌ಗೆ ಲೀಗಲ್ ನೋಟಿಸ್ ನೀಡಿರುವುದು ಮತ್ತು ಕಂಟೆಂಟ್ ಡಿಲೀಟ್ ಮಾಡಲು ಸೂಚಿಸಿರುವುದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.








