ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಕೈದಿಯೊಂದಿಗೆ ಸರಸ-ಸಲ್ಲಾಪ ನಡೆಸಿರುವ ವಿಡಿಯೋ ವೈರಲ್ ಆಗಿ ವಿವಾದಕ್ಕೆ ಕಾರಣವಾಗಿದ್ದ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಪಿಎಸ್ಐ ಜಯಶ್ರೀ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇಲಾಖಾ ವಿಚಾರಣೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಆಂತರಿಕ ಭದ್ರತಾ ವಿಭಾಗದ ಐಜಿಪಿ ಕೆ. ತ್ಯಾಗರಾಜನ್ ಅಮಾನತು ಆದೇಶ ಹೊರಡಿಸಿದ್ದಾರೆ.
ತುಮಕೂರಿನ ಕುಣಿಗಲ್ ಮೂಲದ ಹಾಗೂ ಬೆಳಗಾವಿ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಸಾಯಿಕುಮಾರ್ ಅಲಿಯಾಸ್ ಸುರೇಶ್ ಜೊತೆ ಪಿಎಸ್ಐ ಜಯಶ್ರೀ ಅವರು ವಿಡಿಯೋ ಕಾಲ್ ಹಾಗೂ ಅಕ್ರಮ ಸಂಪರ್ಕ ಹೊಂದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಜೈಲಿನಲ್ಲಿದ್ದ ಕೈದಿಗೆ ಮೊಬೈಲ್ ಒದಗಿಸಿ, ಆತನೊಂದಿಗೆ ವಿಡಿಯೋ ಕಾಲ್ನಲ್ಲಿ ಅಶ್ಲೀಲವಾಗಿ ವರ್ತಿಸಿರುವುದಾಗಿ ಹೇಳಲಾದ ವಿಡಿಯೋಗಳು ಮತ್ತು ಆಡಿಯೋ ಕ್ಲಿಪ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಇದಲ್ಲದೆ, ಕೈದಿಯ ಬ್ಯಾಂಕ್ ಖಾತೆ ಹಾಗೂ ಆತನ ತಾಯಿಯ ಮೂಲಕ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿಸಿಕೊಂಡಿರುವ ಆರೋಪವೂ ಕೇಳಿಬಂದಿದೆ. ಕೈದಿಗೆ ಸೇರಿದ ಸ್ಕೂಟರ್ ಮತ್ತು ಸ್ವಿಫ್ಟ್ ಕಾರನ್ನು ಜಯಶ್ರೀ ಅವರ ಹೆಸರಿಗೆ ವರ್ಗಾಯಿಸಿಕೊಂಡಿರುವುದಕ್ಕೆ ಸಂಬಂಧಿಸಿದ ಚಾಟ್ಗಳು ಕೂಡ ಪತ್ತೆಯಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸಚಿವ ಪ್ರಿಯಾಂಕ್ ಖರ್ಗೆ ಅವರ ಸೂಚನೆಯ ಮೇರೆಗೆ ಇಲಾಖೆಯಿಂದ ಆಂತರಿಕ ತನಿಖೆ ನಡೆಸಲಾಗಿದ್ದು, ಮೇಲ್ನೋಟಕ್ಕೆ ಕರ್ತವ್ಯಲೋಪ, ಅಶಿಸ್ತು ಮತ್ತು ಅಧಿಕಾರ ದುರುಪಯೋಗ ಕಂಡುಬಂದ ಹಿನ್ನೆಲೆಯಲ್ಲಿ ಪಿಎಸ್ಐ ಜಯಶ್ರೀ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ








