ತಿರುನೆಲ್ವೇಲಿ: ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಅನಿಯಮಿತ ಪೂರೈಕೆ ವಿಚಾರವಾಗಿ ನಡೆದ ವಾಗ್ವಾದ ಹಿಂಸಾಚಾರಕ್ಕೆ ತಿರುಗಿ, ಪಂಚಾಯಿತಿ ಅಧ್ಯಕ್ಷರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಕಣ್ಣನಲ್ಲೂರು ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ ಪಂಚಾಯಿತಿ ಮಂಡಳಿ ಅಧ್ಯಕ್ಷ ಮಹಾರಾಜನ್ ಗಂಭೀರವಾಗಿ ಗಾಯಗೊಂಡು ಬಳಿಕ ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಕ್ಕಿ ಪಾಂಡಿಯನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಕಣ್ಣನಲ್ಲೂರು ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗದ ಹಿನ್ನೆಲೆಯಲ್ಲಿ ಎಸಕ್ಕಿ ಪಾಂಡಿಯನ್ ಅಸಮಾಧಾನಗೊಂಡಿದ್ದ. ಈ ವಿಚಾರವಾಗಿ ಪಂಚಾಯಿತಿ ಅಧ್ಯಕ್ಷ ಮಹಾರಾಜನ್ ಅವರೊಂದಿಗೆ ಆತ ವಾಗ್ವಾದ ನಡೆಸಿದ್ದಾನೆ. ಮಾತಿನ ಚಕಮಕಿ ತೀವ್ರಗೊಂಡ ಬಳಿಕ ಎಸಕ್ಕಿ ಪಾಂಡಿಯನ್ ಇಟ್ಟಿಗೆಯಿಂದ ಮಹಾರಾಜನ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಹಲ್ಲೆಯಲ್ಲಿ ಮಹಾರಾಜನ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಬಳಿಕ ಗಾಯಗಳಿಂದಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಎಸಕ್ಕಿ ಪಾಂಡಿಯನ್‌ನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಈ ಹತ್ಯೆ ಇದೀಗ ತಮಿಳುನಾಡಿನಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗಿದೆ. ಡಿಎಂಕೆ ಸಂಸದೆ ಕನಿಮೊಳಿ ಅವರು ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಪ್ರಶ್ನೆ ಎತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಕುರಿತು ಪ್ರತಿಭಟಿಸುತ್ತಿದ್ದ ಜನರೊಂದಿಗೆ ಮಾತುಕತೆ ನಡೆಸುತ್ತಿದ್ದ ಪಂಚಾಯಿತಿ ಅಧ್ಯಕ್ಷರೇ ಹತ್ಯೆಯಾಗಿರುವುದು ಆಘಾತಕಾರಿ ಎಂದು ಅವರು ಹೇಳಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ








