ಅಮೆರಿಕದ ಮ್ಯಾಸಚೂಸೆಟ್ಸ್ನಲ್ಲಿ ಮೂವರು ಮಕ್ಕಳನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಲಿಂಡ್ಸೆ ಕ್ಲಾನ್ಸಿ ಪ್ರಕರಣದಲ್ಲಿ ನ್ಯಾಯಾಧೀಶರು ಮಿಸ್ಟ್ರಯಲ್ ಘೋಷಿಸಿದ್ದಾರೆ. ಏಳು ದಿನಗಳ ಕಾಲ ಚರ್ಚೆ ನಡೆಸಿದರೂ, ಆರೋಪಿಯು ಮಕ್ಕಳ ಸಾವಿಗೆ ಕ್ರಿಮಿನಲ್ ಹೊಣೆಗಾರಳೇ ಎಂಬ ವಿಚಾರದಲ್ಲಿ ಜ್ಯೂರಿ ಸದಸ್ಯರು ಸರ್ವಾನುಮತದ ತೀರ್ಮಾನಕ್ಕೆ ಬರಲು ವಿಫಲರಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಪ್ರಕರಣಕ್ಕೆ ಇನ್ನೂ ಅಂತಿಮ ತೀರ್ಪು ಬಂದಿಲ್ಲ.
36 ವರ್ಷದ ಮಾಜಿ ಲೇಬರ್ ಅಂಡ್ ಡೆಲಿವರಿ ನರ್ಸ್ ಲಿಂಡ್ಸೆ ಕ್ಲಾನ್ಸಿ ವಿರುದ್ಧ 2023ರ ಜನವರಿ 24ರಂದು ತನ್ನ ಐದು ವರ್ಷದ ಮಗಳು ಕೋರಾ, ಮೂರು ವರ್ಷದ ಮಗ ಡಾಸನ್ ಹಾಗೂ ಎಂಟು ತಿಂಗಳ ಮಗು ಕ್ಯಾಲನ್ ಅವರನ್ನು ಹತ್ಯೆ ಮಾಡಿದ ಆರೋಪವಿದೆ. ವ್ಯಾಯಾಮಕ್ಕೆ ಬಳಸುವ ಬ್ಯಾಂಡ್ಗಳಿಂದ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ಬಳಿಕ, ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.
ಆದರೆ ಕ್ಲಾನ್ಸಿ ಪರ ವಕೀಲರು, ಹೆರಿಗೆಯ ನಂತರ ಉಂಟಾಗುವ ಅಪರೂಪದ ‘ಪೋಸ್ಟ್ಪಾರ್ಟಮ್ ಸೈಕೋಸಿಸ್’ ಎಂಬ ತೀವ್ರ ಮಾನಸಿಕ ಸ್ಥಿತಿಯಿಂದ ಬಳಲುತ್ತಿದ್ದ ಕಾರಣ ಆಕೆ ತನ್ನ ಕೃತ್ಯಗಳ ಮೇಲೆ ನಿಯಂತ್ರಣ ಹೊಂದಿರಲಿಲ್ಲ ಎಂದು ವಾದಿಸಿದ್ದಾರೆ. ವಿಚಾರಣೆ ವೇಳೆ ಆಕೆಯ ಮಾನಸಿಕ ಆರೋಗ್ಯ ಹದಗೆಟ್ಟಿದ್ದ ಬಗ್ಗೆ ಕುಟುಂಬಸ್ಥರು ಹಾಗೂ ವೈದ್ಯಕೀಯ ತಜ್ಞರು ಸಾಕ್ಷ್ಯ ನೀಡಿದ್ದಾರೆ.
ಇದೀಗ ಪ್ರಾಸಿಕ್ಯೂಷನ್ಗೆ ಪ್ರಕರಣವನ್ನು ಮತ್ತೆ ವಿಚಾರಣೆಗೆ ಒಳಪಡಿಸುವುದು, ಆರೋಪಗಳನ್ನು ಕೈಬಿಡುವುದು ಅಥವಾ ಲಿಂಡ್ಸೆ ಕ್ಲಾನ್ಸಿ ಪರ ವಕೀಲರೊಂದಿಗೆ ಒಪ್ಪಂದದ ಬಗ್ಗೆ ಮಾತುಕತೆ ನಡೆಸುವುದು ಸೇರಿದಂತೆ ಹಲವು ಆಯ್ಕೆಗಳಿವೆ.








