ಪುತ್ತೂರು : ಪುತ್ತೂರಿನ ಐತಿಹಾಸಿಕ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಬೃಹತ್ ಪ್ರಮಾಣದ ಹಣಕಾಸು ಅವ್ಯವಹಾರ ನಡೆಸಿದೆ ಎಂದು ‘ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ’ ಗಂಭೀರ ಆರೋಪ ಮಾಡಿದೆ. ಈ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲೇ ತನಿಖೆ ನಡೆಯಬೇಕು ಎಂದು ಸಮಿತಿ ಆಗ್ರಹಿಸಿದೆ.
ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಈ ಅಕ್ರಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಮಿತಿಯ ಮುಖಂಡ ದಿನೇಶ್ ಕುಮಾರ್ ಜೈನ್, “ಅವ್ಯವಹಾರದ ಪಾರದರ್ಶಕ ತನಿಖೆಗಾಗಿ ದೇವಸ್ಥಾನದ ಈಗಿನ ವ್ಯವಸ್ಥಾಪನಾ ಸಮಿತಿಯನ್ನು ತಕ್ಷಣವೇ ಅಮಾನತಿನಲ್ಲಿಡಬೇಕು” ಎಂದು ಒತ್ತಾಯಿಸಿದರು.
ದೇವಸ್ಥಾನದ ಈಗಿನ ಆಡಳಿತ ಮಂಡಳಿ ಅಧಿಕಾರಿ ವಹಿಸಿಕೊಂಡ ಬಳಿಕ 2025 ಜನವರಿಯಿಂದ ಡಿಸೆಂಬರ್ ವರೆಗೆ ಮತ್ತು 2026 ಮೇ ತನಕ ಒಟ್ಟು 40 ಲಕ್ಷ ರೂಪಾಯಿಗಳನ್ನು ಸಣ್ಣ-ಪುಟ್ಟ ಖರ್ಚು ಎಂದು ಉಲ್ಲೇಖಿಸಿ ಹಣವನ್ನು ಪಡೆಯಲಾಗಿದೆ. ಅಲ್ಲದೆ 30 ಲಕ್ಷ ರೂಪಾಯಿಗಳನ್ನು ಸೆಲ್ಫ್ ಡ್ರಾ ಮಾಡಲಾಗಿದೆ. ಯಾವುದೇ ಸರಕಾರಿ ವ್ಯವಸ್ಥೆಯಲ್ಲಿ ಈ ರೀತಿ ಹಣವನ್ನು ಸೆಲ್ಫ್ ಡ್ರಾ ಮಾಡಲು ಅವಕಾಶವಿಲ್ಲದಿದ್ದರೂ, ಮಹಾಲಿಂಗೇಶ್ವರ ದೇವಸ್ಥಾನದ ಸಮಿತಿ ಕಾನೂನುಬಾಹಿರವಾಗಿ ಈ ರೀತಿ ಮಾಡಿದೆ.
ದೇವಸ್ಥಾನಕ್ಕೆ ಸೇರಿದ ಜಾಗದ ಕಟ್ಟಡ ತೆರವು ಕಾರ್ಯಕ್ಕೆ ಜೆಸಿಬಿ, ಹಿಟಾಚಿ ಕೆಲಸಗಳಿಗೆ 70 ಲಕ್ಷ ರೂಪಾಯಿಗಳನ್ನು ದೇವಸ್ಥಾನದಿಂದ ಖರ್ಚು ಮಾಡಲಾಗಿದೆ ಎಂದು ಮಾಹಿತಿ ಹಕ್ಕಿನಲ್ಲಿ ತಿಳಿಸಲಾಗಿದೆ. ಕಮಿಟಿಯ ಸದಸ್ಯನ ಜೆಸಿಬಿ ಕೆಲಸವನ್ನು ನಿಲ್ಲಿಸಿ ಅಧ್ಯಕ್ಷರು ತನ್ನದೇ ಸ್ನೇಹಿತನ ಜೆಸಿಬಿ,ಹಿಟಾಚಿಗಳಲ್ಲಿ ಕೆಲಸ ಮಾಡಿಸಿದ್ದಾರೆ. ತೆಂಕಿಲದಲ್ಲಿ 15 ಎಕರೆ ಜಾಗವನ್ನು ವಶಪಡಿಸಿಕೊಳ್ಳುವಾಗ ಆ ಜಾಗದಲ್ಲಿದ್ದ ಹಲಸು,ಹೆಬ್ಬಲಸು,ಬೇಂಗ ಮೊದಲಾದ ಬೆಲೆಬಾಳುವ ಮರಗಳನ್ನು ಕಡಿದು ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ಅವರು ಈ ಎಲ್ಲಾ ಕಾರಣಕ್ಕಾಗಿ ವ್ಯವಸ್ಥಾಪನಾ ಸಮಿತಿಯನ್ನು ಅಮಾನತಿನಲ್ಲಿಟ್ಟು ಇಲಾಖೆ ಕೂಡಲೇ ಈ ಅವ್ಯವಹಾರವನ್ನು ತನಿಖೆ ಮಾಡಬೇಕು.
ಹಣಕಾಸು ಮತ್ತು ದೇವರ ಭೂಮಿಯ ಅವ್ಯವಹಾರ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ತನಿಖೆಯಾಗಬೇಕು. ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿಯವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕು. ಸಂರಕ್ಷಣಾ ಸಮಿತಿಯ ಈ ಬೇಡಿಕೆಯನ್ನು ಧಾರ್ಮಿಕ ದತ್ತಿ ಇಲಾಖೆ ಇದನ್ನು ಒಂದು ವಾರದೊಳಗೆ ಮಾಡದಿದ್ದಲ್ಲಿ ಸೆಪ್ಟೆಂಬರ್ 21ರಂದು ಬೃಹತ್ ಭಕ್ತರ ಸಭೆಯ ಮೂಲಕ ಜನಾಂದೋಲನ ನಡೆಸಲಾಗುವುದು ಎಂದು ಎಚ್ಚರಿಸಿದರು.








