ಬೆಳಗಾವಿ: ಆಸ್ತಿ ಪಾಲು ಮಾಡಲು ಅರ್ಜಿ ಸಲ್ಲಿಸಲು ಬಂದಿದ್ದಾಗ ಗ್ರಾಮ ಪಂಚಾಯತಿ ಕಚೇರಿಯಲ್ಲೇ ತಂದೆ ಮತ್ತು ಮಗಳ ಬರ್ಬರ ಹತ್ಯೆ ನಡೆದಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ. ಮಾಜಿ ಯೋಧ ರುದ್ರಪ್ಪ ಕುಂದರಗಿ (67) ಹಾಗೂ ಪುತ್ರಿ ಶಶಿಕಲಾ ಕುಂದರಗಿ (26) ಹತ್ಯೆಯಾದ ದುರ್ದೈವಿಗಳು. ಈ ಸಂಬಂಧ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಹತ್ಯೆಯಾಗಿರುವ ತಂದೆ ಮತ್ತು ಮಗಳು ಧಾರವಾಡದ ನಿವಾಸಗಳು. ರುದ್ರಪ್ಪ ಹಾಗೂ ಅವರ ಸಹೋದರರಾದ ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ ನಡುವೆ ಹಲವು ದಿನಗಳಿಂದ ಆಸ್ತಿ ಪಾಲು ಸಂಬಂಧ ಜಗಳವಿತ್ತು. ಒಟ್ಟು 38 ಗುಂಟೆ ಆಸ್ತಿಯನ್ನು ಮೂವರು ಸಹೋದರರಿಗೆ ಸಮಾನವಾಗಿ ಹಂಚಿಕೆ ಮಾಡಿ ನ್ಯಾಯಾಲಯ ಆದೇಶ ಹೊರಡಿಸಿತ್ತು. ಆದರೆ, ತನಗೆ ಬಂದಿದ್ದ ಪಾಲಿನ ಜಮೀನನ್ನು ರುದ್ರಪ್ಪ ಮೊದಲೇ ಮಾರಾಟ ಮಾಡಿಕೊಂಡಿದ್ದರು. ಆದಾಗ್ಯೂ, ಉಳಿದ ಜಮೀನಿನಲ್ಲೂ ತನಗೆ ಪಾಲು ಬೇಕು ಎಂದು ಅವರು ಪಟ್ಟು ಹಿಡಿದಿದ್ದರು.
ಇಡೀ ಆಸ್ತಿ ರುದ್ರಪ್ಪ ಅವರ ಹೆಸರಿನಲ್ಲಿಯೇ ಇದ್ದ ಕಾರಣಕ್ಕೆ ಸಹೋದರರ ನಡುವೆ ನಿರಂತರ ಗಲಾಟೆ ನಡೆಯುತ್ತಿತ್ತು. ತಮ್ಮ ಪಾಲಿನ ಆಸ್ತಿಯಲ್ಲೂ ರುದ್ರಪ್ಪ ಪಾಲು ಕೇಳಿದ್ದರಿಂದ ಇಬ್ಬರು ಸಹೋದರರು ಆಕ್ರೋಶಗೊಂಡಿದ್ದಾರೆ.
ಗ್ರಾಮ ಪಂಚಾಯತಿ ಕಚೇರಿಗೆ ನುಗ್ಗಿ ಮಾರಕಾಸ್ತ್ರಗಳಿಂದ ದಾಳಿ
ಧಾರವಾಡದಿಂದ ಬಾಡಿಗೆ ಕಾರಿನಲ್ಲಿ ಶಶಿಕಲಾ ಜೊತೆ ಅವರಾದಿ ಗ್ರಾಮಕ್ಕೆ ಬಂದಿದ್ದ ರುದ್ರಪ್ಪ, ಆಸ್ತಿ ಪಾಲುದಾರಿಕೆಯ ದಾಖಲಾತಿಗೆ ಅರ್ಜಿ ಸಲ್ಲಿಸಲು ಗ್ರಾಮ ಪಂಚಾಯತಿ ಕಚೇರಿಗೆ ತೆರಳಿದ್ದರು. ಈ ವಿಷಯ ತಿಳಿದ ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ ಹಾಗೂ ಸಹೋದರನ ಪುತ್ರ ಮಡಿವಾಳಪ್ಪ ಕುಂದರಗಿ ಏಕಾಏಕಿ ಕಚೇರಿಗೆ ನುಗ್ಗಿ ದಾಳಿ ಮಾಡಿದ್ದಾರೆ
ಗ್ರಾಮ ಪಂಚಾಯತಿ ಕಚೇರಿಯೊಳಗೆ ರುದ್ರಪ್ಪ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು, ತಂದೆಯನ್ನು ರಕ್ಷಿಸಲು ಶಶಿಕಲಾ ಮುಂದಾಗಿದ್ದಾಳೆ. ಈ ವೇಳೆ ಆರೋಪಿಗಳು ಶಶಿಕಲಾ ಜಡೆಯನ್ನು ಕತ್ತರಿಸಿ, ಮಾರಕಾಸ್ತ್ರಗಳಿಂದ ಅಪ್ಪ ಮತ್ತು ಮಗಳು ಇಬ್ಬರನ್ನೂ ಕಚೇರಿಯಲ್ಲೇ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಜಗಳ ಬಿಡಿಸಲು ಹೋದವನ ಮೇಲೂ ದಾಳಿ
ತಂದೆ ಮತ್ತು ಮಗಳ ಜೊತೆ ಕಾರ್ನಲ್ಲಿ ಹೋಗಿದ್ದವನ ಮೇಲೂ ಅಟ್ಯಾಕ್ ಮಾಡಲಾಗಿದೆ. ಹತ್ಯೆಯಾದ ಮಗಳ ಗೆಳೆಯ ರಾಹುಲ್ ಮೇಲೆ ದಾಳಿ ಮಾಡಲಾಗಿದೆ. ರಾಹುಲ್ ಧಾರವಾಡದ ಶಿವಗಿರಿ ನಗರದ ನಿವಾಸಿ. ತೀವ್ರ ಗಾಯಗೊಂಡಿರುವ ರಾಹುಲ್ನನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ಎಸ್ಪಿ ಭೇಟಿ: ಪರಿಶೀಲನೆ
ಇನ್ನು ಈ ಜೋಡಿ ಕೊಲೆಯಿಂದ ಅವರಾದಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಘಟನಾ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜೊತೆಗೆ ಸೋಕೋ ತಜ್ಞರ ತಂಡ ಕೂಡ ಆಗಮಿಸಿದ್ದು, ಮಹಜರು ಪ್ರಕ್ರಿಯೆ ನಡೆಸಿದೆ. ಹತ್ಯೆಗೆ ನಿಖರ ಕಾರಣಗಳ ಕುರಿತು ಮಾಹಿತಿ ಕಲೆಹಾಕುತ್ತಿರುವ ಎಸ್ಪಿ, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಸೂಚನೆ ನೀಡಿದ್ದಾರೆ.








