ಮಂಗಳೂರು : ಮಂಗಳೂರಿನಲ್ಲಿ ನಡೆಯುತ್ತಿರುವ ವಿಶೇಷ ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಯು.ಟಿ. ಖಾದರ್ ಅವರು ತುಳುನಾಡಿನ ಪವಿತ್ರ ದೈವಾರಾಧನೆಯನ್ನು ಪ್ರಚಾರಕ್ಕೆ ಬಳಸಿಕೊಂಡು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ” ಮಂಗಳೂರಿಗೆ ಬಂದಿರುವುದು ಸಚಿವ ಸಂಪುಟ ಸಭೆ ನಡೆಸಿ, ಕರಾವಳಿಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುವುದಕ್ಕಾಗಿ ಎಂದು ಜನರು ನಿರೀಕ್ಷಿಸಿದ್ದರು. ಆದರೆ ನಮ್ಮ ನೆಲದ ದೈವಾರಾಧನೆ, ತುಳು ಸಂಸ್ಕೃತಿ ಮತ್ತು ಧಾರ್ಮಿಕ ಭಾವನೆಗಳನ್ನು ಕೇವಲ ಫೋಟೋಶೂಟ್ ಹಾಗೂ ಪ್ರಚಾರದ ವಸ್ತುವಾಗಿಸುವುದು ಎಷ್ಟು ಸರಿ? ದೈವಾರಾಧನೆಯ ಪವಿತ್ರ ಗಗ್ಗರವನ್ನು ಮನೋರಂಜನೆಯ ಅಥವಾ ಸಾರ್ವಜನಿಕ ಮ್ಯೂಸಿಯಂ ವಸ್ತುವಾಗಿ ತೋರಿಸಿರುವುದು, ಅದನ್ನೇ ಚಪ್ಪಲಿ ಹಾಕಿಕೊಂಡು ವೀಕ್ಷಿಸುವುದು ಇದೆಲ್ಲಾ ತುಳುನಾಡಿನ ಜನರ ಭಾವನೆಗಳಿಗೆ ನೋವುಂಟು ಮಾಡುವ ಸಂಗತಿ. ದೈವಾರಾಧನೆ ನಮಗೆ ಕೇವಲ ಒಂದು ಆಚರಣೆಯಲ್ಲ. ಅದು ನಮ್ಮ ನಂಬಿಕೆ. ನಮ್ಮ ಪರಂಪರೆ, ನಮ್ಮ ಅಸ್ಮಿತೆ. ಕೇವಲ ಫೋಟೋಶೂಟ್ಗಾಗಿ ನಮ್ಮ ನಂಬಿಕೆಯನ್ನು ಅವಮಾನಿಸುವುದನ್ನು ನಾವು ತುಳುವರು ಸಹಿಸುವುದಿಲ್ಲ. ತುಳುನಾಡಿನ ಸಂಸ್ಕೃತಿ ಯಾರೊಬ್ಬರ ಪ್ರಚಾರದ ಸಾಧನವಲ್ಲ. ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುವುದನ್ನು ಪ್ರಶ್ನಿಸಲು ಈ ನೆಲದ ಜನರು ಎಂದಿಗೂ ಹಿಂಜರಿಯುವುದಿಲ್ಲ.
ತುಳುವರ ಪರಂಪರೆಗೆ ಗೌರವ ನೀಡುವುದನ್ನು ಕಾಂಗ್ರೆಸ್ಸಿಗರು ಮೊದಲು ಕಲಿತುಕೊಳ್ಳಲಿ, ತುಳುವರ ಭಾವನೆಗಳೊಂದಿಗೆ ಆಟವಾಡುವುದನ್ನು ನಾವೆಂದಿಗೂ ಸಹಿಸಲಾರೆವು ಎಂದು ಹೇಳಿದೆ. “
ಸದ್ಯ ಮಂಗಳೂರಿನಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬೆನ್ನಲ್ಲೇ ಈ ಸಾಂಸ್ಕೃತಿಕ ವಿಷಯವು ಕರಾವಳಿಯುದ್ದಕ್ಕೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.








