ಮಂಗಳೂರು: ಕಾಂಗ್ರೆಸ್ ಪಕ್ಷವು ಕೇವಲ ರಾಜಕೀಯ ಶಕ್ತಿಯಲ್ಲ. ಅದು ಕೋಟ್ಯಂತರ ಸಾಮಾನ್ಯ ಜನರ ಆಶಯಗಳಿಗೆ ಧ್ವನಿಯಾಗಿರುವ ಮಹಾನ್ ಚಳವಳಿ. ಜನರ ಮುಂದಿನ ಆಶಾಭಾವನೆಯೇ ಕಾಂಗ್ರೆಸ್ ಆಗಿದ್ದು, ಪಕ್ಷಕ್ಕಾಗಿ ತಳಮಟ್ಟದಲ್ಲಿ ದುಡಿಯುವ ಕಟ್ಟಕಡೆಯ ಕಾರ್ಯಕರ್ತನಿಗೂ ಸೂಕ್ತ ಗೌರವ ಮತ್ತು ಶಕ್ತಿ ತುಂಬುವ ಮೂಲಕ ಬೂತ್ ಮಟ್ಟದಿಂದ ಪಕ್ಷವನ್ನು ಮರುಸಂಘಟಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಘೋಷಿಸಿದರು.
ಹಿರಿಯ ನಾಯಕರ ಮಾರ್ಗದರ್ಶನ ಹಾಗೂ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷದ ಗತವೈಭವವನ್ನು ಮರುಕಳಿಸುವಂತೆ ಶ್ರಮಿಸುವುದಾಗಿ ಅವರು ತಿಳಿಸಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ(ಕಾಂಗ್ರೆಸ್ ಭವನ) ದಲ್ಲಿ ಗುರುವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷ ಹರೀಶ್ ಕುಮಾರ್ ಅವರಿಂದ ಪದ್ಮರಾಜ್ ಆರ್. ಪೂಜಾರಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ನವೆಂಬರ್‌ನಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ
ತಮ್ಮ ಮುಂದಿನ ಕಾರ್ಯಯೋಜನೆಗಳ ಕುರಿತು ಮಾತನಾಡಿದ ಪದ್ಮರಾಜ್, ಪಕ್ಷವು ತಮ್ಮ ಮೇಲೆ ನಂಬಿಕೆಯಿಟ್ಟು ದೊಡ್ಡ ಜವಾಬ್ದಾರಿ ನೀಡಿದೆ. ಕಾರ್ಯಕರ್ತರ ನಿರೀಕ್ಷೆ ಹುಸಿಯಾಗದಂತೆ ನೋಡಿಕೊಳ್ಳುವುದು ತಮ್ಮ ಕರ್ತವ್ಯ ಎಂದು ಹೇಳಿದರು.
ಮುಂದಿನ ಎಂಟು ದಿನಗಳಲ್ಲಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದ ಬೂತ್‌ಗಳಿಗೆ ಖುದ್ದಾಗಿ ಭೇಟಿ ನೀಡಿ, ಬೂತ್ ಅಧ್ಯಕ್ಷರು ಹಾಗೂ ಸ್ಥಳೀಯ ಕಾರ್ಯಕರ್ತರನ್ನು ನೇರವಾಗಿ ಭೇಟಿಯಾಗುವುದಾಗಿ ತಿಳಿಸಿದರು. ಅವರ ಶ್ರಮವನ್ನು ಗುರುತಿಸಿ ಬೆನ್ನಿಗೆ ನಿಲ್ಲುವ ಕೆಲಸ ಮಾಡಲಾಗುವುದು ಎಂದರು.
ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗಿನ ಎಲ್ಲ ಕಾರ್ಯಕರ್ತರನ್ನು ಒಗ್ಗೂಡಿಸಿ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ನವೆಂಬರ್ ಮೊದಲ ವಾರದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗುವುದು ಎಂದು ತಿಳಿಸಿದರು.
ತುಳು ಭಾಷೆಗೆ ಮಾನ್ಯತೆ ಕಾಂಗ್ರೆಸ್ ಹೆಗ್ಗಳಿಕೆ
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ₹32,000 ಕೋಟಿ ಅನುದಾನ ಮೀಸಲಿಟ್ಟಿರುವುದು ಪ್ರಮುಖ ಮೈಲಿಗಲ್ಲು ಎಂದು ಪದ್ಮರಾಜ್ ಹೇಳಿದರು.
ಕರಾವಳಿಯ ಬಹುಕಾಲದ ಕನಸಾದ ತುಳು ಭಾಷೆಗೆ ಎರಡನೇ ಅಧಿಕೃತ ಆಡಳಿತ ಭಾಷೆಯ ಮಾನ್ಯತೆ ನೀಡಿದ ಐತಿಹಾಸಿಕ ಹೆಗ್ಗಳಿಕೆ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಅವರು ತಿಳಿಸಿದರು. ಈ ಸಾಧನೆಗಳನ್ನು ಪ್ರತಿಯೊಂದು ಮನೆ-ಮನಗಳಿಗೆ ತಲುಪಿಸುವುದಾಗಿ ಹೇಳಿದರು.
ಕಾಂಗ್ರೆಸ್ ಸರ್ಕಾರವು ಕಾರ್ಯಕರ್ತರು ತಲೆ ಎತ್ತಿ ನಿಲ್ಲುವಂತಹ ಆಡಳಿತ ನೀಡುತ್ತಿದ್ದು, ವಿಪಕ್ಷಗಳ ಟೀಕೆಗೆ ಹಿಂಜರಿಯದೆ, ಹೊಗಳಿಕೆಗೆ ಹಿಗ್ಗದೆ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಬಿಜೆಪಿ ಆಡಳಿತದಿಂದ ಬೇಸತ್ತು ಮರಳಿ ಕಾಂಗ್ರೆಸ್‌ಗೆ ಬರುತ್ತಿರುವ ಮುಖಂಡರು ಮತ್ತು ಸಾರ್ವಜನಿಕರನ್ನು ವಿಶ್ವಾಸಕ್ಕೆ ಪಡೆದು ಪಕ್ಷವನ್ನು ಬಲಪಡಿಸುವುದಾಗಿ ಹೇಳಿದರು.
ಎಲ್ಲ ಕ್ಷೇತ್ರಗಳಲ್ಲೂ ಗೆಲುವಿನ ಗುರಿ: ಹರೀಶ್ ಕುಮಾರ್
ಇದೇ ಸಂದರ್ಭದಲ್ಲಿ ನಿರ್ಗಮಿತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರನ್ನು ಜಿಲ್ಲಾ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು.
ಬಳಿಕ ಮಾತನಾಡಿದ ಹರೀಶ್ ಕುಮಾರ್, ಪದ್ಮರಾಜ್ ಅವರು ವಿದ್ಯಾರ್ಥಿ ದೆಸೆಯಿಂದಲೇ ಪಕ್ಷಕ್ಕಾಗಿ ದುಡಿದವರು. ಕಳೆದ ಎರಡೂವರೆ ವರ್ಷಗಳಲ್ಲಿ ಪ್ರತಿ ಬ್ಲಾಕ್‌ಗೆ ಭೇಟಿ ನೀಡಿ ಪಕ್ಷ ಕಟ್ಟಿದ ಪರಿಣಾಮ ಇಂದು ಕಾರ್ಯಕರ್ತರಿಂದಲೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ದೊಡ್ಡ ಜವಾಬ್ದಾರಿ ನಿರ್ವಹಿಸುವಾಗ ಮಾತೃ ಹೃದಯದ ಮಮತೆಯೂ ಬೇಕು. ಸಂಘಟನೆಯ ಹಿತದೃಷ್ಟಿಯಿಂದ ವಜ್ರದಂತಹ ಕಠೋರ ನಿರ್ಧಾರಗಳೂ ಅನಿವಾರ್ಯ ಎಂದು ಅವರು ಹೇಳಿದರು.
ನಮ್ಮೊಳಗಿನ ಒಡಕಿನಿಂದಲೇ ಹಿನ್ನಡೆಯಾಗಿದ್ದು, ಇನ್ನು ಮುಂದೆ ಒಗ್ಗಟ್ಟು ಪ್ರದರ್ಶಿಸಬೇಕಿದೆ. ಮುಂಬರುವ ಚುನಾವಣೆಗಳಲ್ಲಿ ಜಿಲ್ಲೆಯ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಪ್ರತಿಯೊಬ್ಬರೂ ಸೈನಿಕನಂತೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವುದು ಕೇವಲ ಅಧ್ಯಕ್ಷರೊಬ್ಬರ ಜವಾಬ್ದಾರಿಯಲ್ಲ. ಅದು ಪ್ರತಿಯೊಬ್ಬ ಕಾಂಗ್ರೆಸಿಗನ ಕರ್ತವ್ಯ ಎಂದು ಹೇಳಿದರು.
ಪಕ್ಷದ ಹುದ್ದೆಗಳು ‘ವಿಸಿಟಿಂಗ್ ಕಾರ್ಡ್’ಗೆ ಸೀಮಿತವಾಗಬಾರದು: ಮಂಜುನಾಥ ಭಂಡಾರಿ
ನೂತನ ಅಧ್ಯಕ್ಷರಿಗೆ ಪಕ್ಷದ ಧ್ವಜ ಹಸ್ತಾಂತರಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಸಂಘಟನ್ ಸೃಜನ್ ಅಭಿಯಾನದಡಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಚುನಾವಣೆ ಮೂಲಕ ಪದ್ಮರಾಜ್ ಅವರ ಆಯ್ಕೆ ನಡೆದಿದೆ ಎಂದು ಹೇಳಿದರು.
ಪಕ್ಷದಲ್ಲಿ ನೀಡಲಾಗುವ ಹುದ್ದೆಗಳು ಕೇವಲ ‘ವಿಸಿಟಿಂಗ್ ಕಾರ್ಡ್’ಗೆ ಸೀಮಿತವಾಗಬಾರದು. ಸಕ್ರಿಯವಾಗಿ ದುಡಿಯುವವರಿಗೆ ಮಾತ್ರ ಜವಾಬ್ದಾರಿ ಹಂಚಿಕೆ ಮಾಡಲಾಗುವುದು ಎಂದರು.
ಕೆಪಿಸಿಸಿಯಲ್ಲಿ ಕಾರ್ಯದರ್ಶಿಗಳು ಹಾಗೂ ಸಂಯೋಜಕರ ನೇಮಕಕ್ಕೆ ಮುಕ್ತ ಅರ್ಜಿ ಆಹ್ವಾನಿಸಲಾಗಿದ್ದು, ಡಾ. ಜಿ. ಪರಮೇಶ್ವರ್ ನೇತೃತ್ವದ ಸಮಿತಿಯು ಸಂದರ್ಶನ ನಡೆಸಿ ಕ್ರಿಯಾಶೀಲರಿಗೆ ಮಾತ್ರ ಹೊಣೆಗಾರಿಕೆ ವಹಿಸಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಪಾಲಿಕೆ ಚುನಾವಣೆಗಳು ಬಾಕಿಯಿದ್ದು, ಸುಮಾರು 4,000 ಜನಪ್ರತಿನಿಧಿ ಸ್ಥಾನಗಳು ಖಾಲಿಯಿವೆ. ವರ್ಷಾಂತ್ಯಕ್ಕೆ ಚುನಾವಣೆ ನಡೆಯುವ ಸಾಧ್ಯತೆಯಿರುವುದರಿಂದ ಮುಂದಿನ ಆರು ತಿಂಗಳು ಸಂಘಟನೆಗೆ ಅತ್ಯಂತ ನಿರ್ಣಾಯಕ ಎಂದು ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಎಲ್ಲರೂ ಕಂಕಣಬದ್ಧರಾಗಬೇಕು ಎಂದು ಕರೆ ನೀಡಿದರು.
ಗಣ್ಯರು, ಮುಖಂಡರು ಉಪಸ್ಥಿತಿ
ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಸೇರಿದಂತೆ ಹಲವು ಗಣ್ಯರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಫಾ. ಗೋಮ್ಸ್ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ರಾಜ್ಯಸಭಾ ಮಾಜಿ ಸದಸ್ಯ ಬಿ. ಇಬ್ರಾಹಿಂ, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಶಕುಂತಳಾ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಪ್ರಮುಖ ಮುಖಂಡರಾದ ಸಂತೋಷ್ ಕುಮಾರ್ ಶೆಟ್ಟಿ, ಟಿ.ಎಂ. ಶಾಹೀದ್ ತೆಕ್ಕಿಲ್, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಅಪ್ಪಿ, ಶಶಿಧರ ಹೆಗ್ಡೆ, ಅಶ್ರಫ್ ಕೆ., ಸುರೇಶ್ ಬಲ್ಲಾಳ್, ಕೃಷ್ಣಪ್ಪ, ಎಂ.ಎಸ್. ಮೊಹಮ್ಮದ್, ಸದಾಶಿವ ಉಳ್ಳಾಲ್, ಉಷಾ ಅಂಚನ್, ಶಾಹುಲ್ ಹಮೀದ್, ಈಶ್ವರ್ ಉಳ್ಳಾಲ್, ಮಹಮ್ಮದ್ ಆಲಿ, ಜೋಕಿಂ, ನವಾಝ್, ಎ.ಸಿ. ಭಂಡಾರಿ, ಲಾವಣ್ಯ ಬಲ್ಲಾಳ್, ಯು.ಕೆ. ಮೋನು ಮೊದಲಾದ ನಾಯಕರು ಉಪಸ್ಥಿತರಿದ್ದರು.
ನೂತನ ಅಧ್ಯಕ್ಷ ಪದ್ಮರಾಜ್ ಅವರ ತಂದೆ ಎಚ್.ಎಂ. ರಾಮಯ್ಯ ಹಾಗೂ ಸಹೋದರ ಡಾ. ಪುರುಷೋತ್ತಮ್ ಉಪಸ್ಥಿತರಿದ್ದು ಶುಭ ಕೋರಿದರು.








