ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಅಮಾನತುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿಸಿ ನೀಡಿದೆ.
ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಉಳಿದ ಇಬ್ಬರು ಚುನಾವಣಾ ಆಯುಕ್ತರ ಸಲಹೆಗಳನ್ನು ಕಡೆಗಣಿಸಿ ಜ್ಞಾನೇಶ್ ಕುಮಾರ್ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಅವರನ್ನು ಅಮಾನತುಗೊಳಿಸುವಂತೆ ಕೋರಿ ರಾಕೇಶ್ ಕುಮಾರ್ ಸಿಂಗ್ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿದಾರ ಪರವಾಗಿ ಹಾಜರಾದ ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ವಿಷಯವನ್ನು ಪ್ರಸ್ತಾಪಿಸಿ ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿದರು. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಅರ್ಜಿಯನ್ನು ಪಟ್ಟಿ ಮಾಡಲು ಒಪ್ಪಿಗೆ ಸೂಚಿಸಿದರು. ಆದರೆ ವಿಚಾರಣೆಗೆ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಿಲ್ಲ.
ಚುನಾವಣಾ ಆಯೋಗದ ವ್ಯಾಪ್ತಿಗೆ ಬರುವ ಯಾವುದೇ ನಿರ್ಧಾರಗಳನ್ನು ಸಿಇಸಿ ಏಕಪಕ್ಷೀಯವಾಗಿ ತೆಗೆದುಕೊಳ್ಳುವಂತಿಲ್ಲ ಎಂದು ಘೋಷಿಸಬೇಕು. ಬಹು-ಸದಸ್ಯ ಆಯೋಗದ ಉದ್ದೇಶವೇ ಸರ್ವಾನುಮತ ಅಥವಾ ಬಹುಮತದ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುವುದಾಗಿದೆ. ಆದರೆ ಈ ಬೃಹತ್ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಪೂರ್ಣ ಆಯೋಗದ ಅನುಮೋದನೆ ಇದೆಯೇ ಎಂಬ ಬಗ್ಗೆ ಗಂಭೀರ ಸಂಶಯಗಳಿವೆ ಎಂದು ವಕೀಲ ವಿಕಾಸ್ ಸಿಂಗ್ ವಾದ ಮಂಡಿಸಿದ್ದಾರೆ.








