ಮಂಗಳೂರು: ನಗರದ ಬೋಳಾರ ಮುಳಿಹಿತ್ತು ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಕಾರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಪಿರ್ಯಾದಿದಾರರ ದೂರಿನ ಪ್ರಕಾರ, ರಾತ್ರಿ ಸುಮಾರು 8 ಗಂಟೆಗೆ ನೋವಾ ಎನ್‌ಕ್ಲೀವ್ ಬಿಲ್ಡಿಂಗ್ ಎದುರು ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಪರಿಚಿತನಾದ ಮೊಹಮ್ಮದ್ ಯಾಸೀನ್ ಅಹಮದ್ ಎಂಬಾತ ಅಡ್ಡಗಟ್ಟಿ ತಡೆದು ನಿಲ್ಲಿಸಿದ್ದಾನೆ. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ, “ನಿನ್ನನ್ನು ಕೊಂದು ಹಾಕಿ ಮನೆಗೆ ಹೋಗುತ್ತೇನೆ” ಎಂದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಇದಕ್ಕೂ ಮೊದಲು ಮಧ್ಯಾಹ್ನ 12.01ರ ಸುಮಾರಿಗೆ ಇದೇ ರಸ್ತೆಯಲ್ಲಿ ಘಟನೆ ನಡೆದಿರುವುದಾಗಿ ಪಿರ್ಯಾದಿಯಲ್ಲಿ ಉಲ್ಲೇಖಿಸಲಾಗಿದೆ. ಯಾಸೀನ್ ಅಹಮದ್ ತನ್ನ ಬಿಳಿ ಬಣ್ಣದ ಮಾರುತಿ ಡಿಸೈರ್ (KA-19-AC-0569) ಕಾರನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ ಎಂದು ಆರೋಪಿಸಲಾಗಿದೆ.
ಕಾರನ್ನು ತೆರವುಗೊಳಿಸುವಂತೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಕೆನ್ನೆಗೆ ಹೊಡೆದು, ಹೊಟ್ಟೆಗೆ ಮುಷ್ಟಿಯಿಂದ ಗುದ್ದಿ, ದ್ವಿಚಕ್ರ ವಾಹನವನ್ನು ಕೆಳಗೆ ಬೀಳಿಸಿ ಹೆಲ್ಮೆಟ್‌ನಿಂದ ಹಲ್ಲೆ ಮಾಡಿದ್ದಾನೆ ಎಂದು ಪಿರ್ಯಾದಿದಾರರು ಆರೋಪಿಸಿದ್ದಾರೆ.
ಹಲ್ಲೆಯಿಂದ ಬೆನ್ನು ಹಾಗೂ ಸೊಂಟಕ್ಕೆ ನೋವುಂಟಾಗಿದ್ದು, ಮೊಹಮ್ಮದ್ ಸಫಾನ್ ಎಂಬವರು ಚಿಕಿತ್ಸೆಗೆ ವೆನ್ಲಕ್ ಆಸ್ಪತ್ರೆಗೆ ಕರೆದೊಯ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.








