ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಹಾಗೂ ಪ್ರತಿಷ್ಠಿತ ಆಭರಣ ಸಂಸ್ಥೆಯಾದ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಹಿರಿಯ ಮಾಲಕ, ಸರಾಫ ಮುಳಿಯ ಶ್ಯಾಮ ಭಟ್ (81) ಅವರು ಭಾನುವಾರ (ಅಕ್ಟೋಬರ್ 4) ತಮ್ಮ ಪಾಂಗಳಾಯಿಯ ನಿವಾಸದಲ್ಲಿ ನಿಧನರಾದರು. ಮೃತರು ಪುತ್ರರಾದ ಮುಳಿಯ ಕೇಶವಪ್ರಸಾದ್, ಮುಳಿಯ ಕೃಷ್ಣನಾರಾಯಣ, ಪುತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಪುತ್ತೂರಿನಲ್ಲಿ ಸಣ್ಣ ಮಟ್ಟದಲ್ಲಿ ಆರಂಭಗೊಂಡ ‘ಮುಳಿಯ ಜುವೆಲ್ಸ್’ ಸಂಸ್ಥೆಯನ್ನು ಸಂಸ್ಥಾಪಕರಾದ ಮುಳಿಯ ಕೇಶವ ಭಟ್ಟರ ಬಳಿಕ ಅವರ ಪುತ್ರ ಸರಾಫ ಶ್ಯಾಮ ಭಟ್ಟರು ಯಶಸ್ವಿಯಾಗಿ ಮುನ್ನಡೆಸಿದ್ದರು. ಪ್ರಸ್ತುತ ಸಂಸ್ಥೆಯು ಪುತ್ತೂರು ಮಾತ್ರವಲ್ಲದೆ ಮಡಿಕೇರಿ, ಬೆಂಗಳೂರು, ಗೋಣಿಕೊಪ್ಪಲು ಹಾಗೂ ಬೆಳ್ತಂಗಡಿಗೆ ವಿಸ್ತರಿಸಲ್ಪಟ್ಟಿದ್ದು, ಈಗ ಅವರ ಪುತ್ರರು ಮುನ್ನಡೆಸುತ್ತಿದ್ದಾರೆ.
ಚಿನ್ನ, ಬೆಳ್ಳಿ ಹಾಗೂ ವಜ್ರದ ಆಭರಣಗಳ ಮಾರಾಟ ಮತ್ತು ಸೇವಾ ಕ್ಷೇತ್ರದಲ್ಲಿ ಶ್ಯಾಮ ಭಟ್ಟರ ಕೊಡುಗೆ ಅಪಾರವಾದದ್ದು. ತಂದೆಯಿಂದ ಬಳುವಳಿಯಾಗಿ ಬಂದ ಆಭರಣ ಉದ್ಯಮಕ್ಕೆ ಹೊಸ ಮೆರುಗು ನೀಡಿ, ಅದನ್ನು ಯಶಸ್ವಿಯಾಗಿ ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಶ್ಯಾಮ ಭಟ್ ಅವರ ನಿಧನಕ್ಕೆ ಕರಾವಳಿಯ ಉದ್ಯಮ ರಂಗ ಹಾಗೂ ಪ್ರಮುಖ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.








