ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಹೊರಗೆ ಬಿದ್ದು ಪ್ರಯಾಣಿಕರೊಬ್ಬರು ಮೃತಪಟ್ಟ ದಾರುಣ ಘಟನೆ ಸೋಮವಾರ ಬೆಳಿಗ್ಗೆ ನಗರದ ಇಂದ್ರಾಳಿ ರೈಲು ನಿಲ್ದಾಣದಲ್ಲಿ ನಡೆದಿದೆ.
ದೆಹಲಿ – ಎರ್ನಾಕುಲಂ ನಡುವೆ ಸಂಚರಿಸುವ ನಿಝಾಮುದ್ದೀನ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 12284) ಇಂದ್ರಾಳಿ ರೈಲು ನಿಲ್ದಾಣದ ಮೂಲಕ ನಿಧಾನಗತಿಯಲ್ಲಿ ಚಲಿಸುತ್ತಿದ್ದ ವೇಳೆ, ಎರಡನೇ ಬೋಗಿಯಲ್ಲಿದ್ದ ಪ್ರಯಾಣಿಕರೊಬ್ಬರು ರೈಲಿನಿಂದ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ರೈಲ್ವೆ ಆರ್‌ಪಿಎಫ್ (RPF) ಸಿಬ್ಬಂದಿಯು ತಕ್ಷಣ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅವರು, ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ವ್ಯಕ್ತಿ ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಮೃತರ ಬಳಿ ಸಿಕ್ಕಿದ ಮತದಾರರ ಗುರುತಿನ ಚೀಟಿಯ ಆಧಾರದ ಮೇಲೆ, ಅವರ ಹೆಸರು ದಿನೇಶ್ ಹಾಗೂ ಅವರು ಬೆಳ್ತಂಗಡಿ ತಾಲೂಕಿನ ಹೊಸಂಗಡಿ ನಿವಾಸಿ ಎಂದು ತಿಳಿದುಬಂದಿದೆ.
ಮೃತರ ವಾರಸುದಾರರು ಅಥವಾ ಸಂಬಂಧಿಕರು ತಕ್ಷಣ ಮಣಿಪಾಲ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಸೂಚಿಸಿದ್ದಾರೆ.








