2011ರ ಡಿಸೆಂಬರ್ 3ರಂದು ಹಿರಿಯಡ್ಕ ಠಾಣಾ ವ್ಯಾಪ್ತಿಯ ಅಂಜಾರು ಗ್ರಾಮದ ಉಡುಪಿ ಜಿಲ್ಲಾ ಕಾರಾಗೃಹದ ಮೊದಲ ಬ್ಯಾರಕ್ನ ಎದುರಿನ ವರಾಂಡದಲ್ಲಿ ಘಟನೆ ನಡೆದಿತ್ತು. ಜೈಲು ವಾರ್ಡನ್ ಅವರು ಬಂಧಿಗಳ ಲೆಕ್ಕ ತೆಗೆದುಕೊಳ್ಳುವ ಸಲುವಾಗಿ ತಮ್ಮ ತಮ್ಮ ಬ್ಯಾರಕ್ಗಳಿಗೆ ತೆರಳುವಂತೆ ಸೂಚಿಸಿದಾಗ, ಅಡುಗೆ ಕೋಣೆಯ ಎದುರಿದ್ದ ವಿಚಾರಣಾ ಬಂಧಿ ಸಫಾನ್ ಹುಸೈನ್ ಅಲಿಯಾಸ್ ರಜಾಕ್ ಎಂಬಾತನು ವಾರ್ಡನ್ರನ್ನು ಉದ್ದೇಶಿಸಿ ಅವಾಚ್ಯವಾಗಿ ಮಾತನಾಡಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ ಎಡ ಕೆನ್ನೆಗೆ ಹೊಡೆದು ನೋವುಂಟು ಮಾಡಿದ್ದನು.
ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 75/2011, ಕಲಂ 506 ಮತ್ತು 333 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಪೊಲೀಸರು 2012ರ ಜನವರಿ 10ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ನಂತರ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ಪ್ರಕರಣವು 2022ರ ಜೂನ್ 24ರಂದು ಎಲ್ಪಿಸಿ ನಂ.02/2022 ಎಂದು ದಾಖಲಾಗಿತ್ತು.
ಆರೋಪಿಯನ್ನು 2026ರ ಏಪ್ರಿಲ್ 23ರಂದು ಬಾಡಿ ವಾರಂಟ್ ಮೂಲಕ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣವು ಎಸ್ಸಿ ನಂ.21/2026ರಂತೆ ವಿಚಾರಣೆಗೊಂಡಿದ್ದು, ಸೆಪ್ಟೆಂಬರ್ 28ರಂದು ನ್ಯಾಯಾಲಯವು ಆರೋಪಿಗೆ 5 ವರ್ಷ ಕಠಿಣ ಶಿಕ್ಷೆ ಹಾಗೂ ₹40,000 ದಂಡ ವಿಧಿಸಿ ತೀರ್ಪು ನೀಡಿದೆ.








