ನವದೆಹಲಿ: ಬಾಲಿವುಡ್ ಹಾಸ್ಯ ನಟ ರಾಜ್‌ಪಾಲ್ ಯಾದವ್ ಅವರಿಗೆ ದೀರ್ಘಕಾಲದ ಚೆಕ್ ಬೌನ್ಸ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಅವರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.
ಸೆಪ್ಟೆಂಬರ್ 15 ರಂದು ಸುಪ್ರೀಂ ಕೋರ್ಟ್, ದೂರುದಾರ ಸಂಸ್ಥೆಗೆ ಬಾಕಿ ಹಣ ಪಾವತಿಸಲು ಕಾಂಕ್ರೀಟ್ ಪ್ರಸ್ತಾವನೆ ಸಲ್ಲಿಸಲು ನಟನಿಗೆ ಎರಡು ವಾರಗಳ ಅಂತಿಮ ಗಡುವು ನೀಡಿತ್ತಲ್ಲದೆ, ಕೋರ್ಟ್ ರಿಜಿಸ್ಟ್ರಿಯಲ್ಲಿ ₹2 ಕೋಟಿ ಠೇವಣಿ ಇಡುವಂತೆ ನಿರ್ದೇಶಿಸಿತ್ತು. ಅಕ್ಟೋಬರ್ 5 ರಂದು (ಸೋಮವಾರ) ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಹಾಗೂ ವಿ. ಮೋಹನ ಅವರನ್ನೊಳಗೊಂಡ ಪೀಠದ ಮುಂದೆ ಈ ಪ್ರಕರಣ ವಿಚಾರಣೆಗೆ ಬಂದಾಗ, ನೀಡಿದ್ದ ಗಡುವು ಮುಗಿದಿದ್ದರೂ ನಟ ಯಾವುದೇ ಹಣ ಪಾವತಿಸಿಲ್ಲ ಎಂಬುದನ್ನು ಪೀಠ ಗಂಭೀರವಾಗಿ ಗಮನಿಸಿತು.
ವಿಚಾರಣೆ ವೇಳೆ ರಾಜ್‌ಪಾಲ್ ಯಾದವ್ ಪರ ವಕೀಲರು, “ದೂರುದಾರ ಸಂಸ್ಥೆ ಏನೂ ಬಡತನದಲ್ಲಲ್ಲ” ಎಂದು ನೀಡಿ ಹೇಳಿಕೆ ಪೀಠದ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು.
ವಕೀಲರ ಈ ಮಾತುಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ, “ದೂರುದಾರರು ನಿಮಗಿಂತ ಶ್ರೀಮಂತರಾಗಿರಬಹುದು, ಆದರೆ ನೀವು ಅವರನ್ನು ವಂಚಿಸಿರುವ ಮಟ್ಟಿಗೆ ಅವರು ಬಡವರಾಗಿದ್ದಾರೆ! ಈ ದುರಹಂಕಾರವನ್ನು ಎಲ್ಲಿಡಬೇಕೋ ಅಲ್ಲಿ ಇಡಬೇಕಾಗುತ್ತದೆ. ನಿಮ್ಮ ಬಾಯಿ ಯಾವಾಗ ತೆರೆಯಬೇಕು ಎಂಬುದನ್ನು ನೀವು ತಿಳಿದುಕೊಂಡಿರಬೇಕು” ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಅಲ್ಲದೆ, ನಟನ ನೈಜ ಸ್ಥಾನ ಜೈಲಿನಲ್ಲಿದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿತು.
ಯಾದವ್ ಅವರ ಮೇಲ್ಮನವಿಯನ್ನು ವಜಾಗೊಳಿಸಬಹುದಾಗಿದ್ದರೂ, ಅದರಿಂದ ದೂರುದಾರರಿಗೆ ಸಿಗಬೇಕಾದ ಹಣದ ಮೊತ್ತಕ್ಕೆ ಧಕ್ಕೆಯಾಗಬಹುದು ಎಂಬ ಕಾರಣಕ್ಕೆ ತಕ್ಷಣವೇ ವಜಾಗೊಳಿಸಲು ನ್ಯಾಯಪೀಠ ಹಿಂಜರಿಯಿತು. ಪ್ರಕರಣದ ಮುಂದಿನ ವಿಚಾರಣೆ ಮುಂದುವರಿದಿದೆ.








