ಬೆಂಗಳೂರು: ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದ ತನಿಖೆ ಕುರಿತು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಐಡಿ ನಡುವೆ ತೀವ್ರ ಸ್ವರೂಪದ ಸಂಘರ್ಷ ಮುಂದುವರಿದಿದೆ. ಈ ಪ್ರಕರಣದಲ್ಲಿ ಇಡಿ ಈಗಾಗಲೇ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದೆ. ಆದರೆ, ತನಿಖೆ ನಡೆಸುತ್ತಿರುವ ಸಿಐಡಿ, ಇಡಿ ವಶಪಡಿಸಿಕೊಂಡಿರುವ ಪ್ರಮುಖ ದಾಖಲೆಗಳು ಹಾಗೂ ಸಿಸಿಟಿವಿ ಡಿವಿಆರ್ಗಳನ್ನು ಹಂಚಿಕೊಳ್ಳುವಂತೆ ಕೋರಿತ್ತು. ಇಡಿ ಈ ದಾಖಲೆಗಳನ್ನು ನೀಡಲು ನಿರಾಕರಿಸಿದಾಗ, ಸಿಐಡಿ ನ್ಯಾಯಾಲಯದ ಮೊರೆ ಹೋಯಿತು. ಸೆಷನ್ಸ್ ನ್ಯಾಯಾಲಯವು ಬಳಿ ಇರುವ ದಾಖಲಾತಿಗಳನ್ನು ಸಿಐಡಿಗೆ ನೀಡುವಂತೆ ಇಡಿಗೆ ಆದೇಶಿಸಿತು. ತನಿಖಾ ಸಂಸ್ಥೆಗಳ ನಡುವೆ ಸಮನ್ವಯ ಇರಬೇಕು ಎಂದು ನ್ಯಾಯಾಲಯ ಹೇಳಿತ್ತು. ಆದರೆ, ನ್ಯಾಯಾಲಯದ ಆದೇಶದ ಹೊರತಾಗಿಯೂ ಇಡಿ ಅಧಿಕಾರಿಗಳು ಇದುವರೆಗೆ ಯಾವುದೇ ದಾಖಲೆಗಳನ್ನು ಸಿಐಡಿಗೆ ಹಸ್ತಾಂತರಿಸಿಲ್ಲ.
ಇಡಿ ಮನಿ ಲಾಂಡರಿಂಗ್ ಅಂಶಗಳ ಮೇಲೆ ಹೆಚ್ಚು ಗಮನ ಹರಿಸಿದ್ದರೆ, ಸಿಐಡಿ ಕ್ರಿಮಿನಲ್ ಅಂಶಗಳು ಮತ್ತು ಅಕ್ರಮಗಳ ತನಿಖೆ ನಡೆಸುತ್ತಿದೆ. ಈ ವಿಭಿನ್ನ ದೃಷ್ಟಿಕೋನಗಳು ಹಾಗೂ ದಾಖಲೆಗಳ ಹಂಚಿಕೆಯಾಗದಿರುವುದು ತನಿಖೆಯ ಪ್ರಗತಿಗೆ ಅಡ್ಡಿಯಾಗಿದೆ. ಪ್ರಮುಖ ಸಾಕ್ಷ್ಯಗಳ ಕೊರತೆಯಿಂದ ಸಿಐಡಿ, ಅಪರಾಧ ಪ್ರಕ್ರಿಯೆಗಳನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.








