ಅಜ್ಮೀರ್: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಇಬ್ಬರು ಮಹಿಳಾ ಕೊಲೆ ಅಪರಾಧಿಗಳನ್ನು ಅಕ್ರಮವಾಗಿ ತನ್ನ ಖಾಸಗಿ ಮನೆಗೆ ಮನೆಕೆಲಸಕ್ಕಾಗಿ ಕರೆದೊಯ್ದು ತಲೆಮರೆಸಿಕೊಂಡಿದ್ದ ಅಜ್ಮೀರ್ ಕೇಂದ್ರ ಕಾರಾಗೃಹದ ಮಾಜಿ ಜೈಲರ್ ದಿವ್ಯಾ ಚೌಧರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ತಿಂಗಳಿಗೂ ಹೆಚ್ಚು ಕಾಲ ಪರಾರಿಯಾಗಿದ್ದ ಅವರನ್ನು ಕೋಟಾದ ವಸತಿ ಅಪಾರ್ಟ್ಮೆಂಟ್ನಲ್ಲಿ ಬಂಧಿಸಿ ಅಜ್ಮೀರ್ಗೆ ಕರೆತರಲಾಗಿದ್ದು, ಬುಧವಾರ ಸ್ಥಳೀಯ ನ್ಯಾಯಾಲಯವು ಅವರು ಹಿಂದೆ ಉಸ್ತುವಾರಿ ವಹಿಸಿಕೊಂಡಿದ್ದ ಅದೇ ಜೈಲಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಅಜ್ಮೀರ್ ಪೊಲೀಸರ ಸೈಬರ್ ಸೆಲ್ ನೀಡಿದ ನಿಖರ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಅಜ್ಮೀರ್ ಎಸ್ಪಿ ಹರ್ಷವರ್ಧನ್ ಅಗರ್ವಾಲಾ ತಿಳಿಸಿದ್ದಾರೆ. ಕಳೆದ ಜುಲೈ 12 ರಂದು, ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕಿರಣ್ ಮತ್ತು ಸನ್ನಾ ಎಂಬ ಇಬ್ಬರು ಮಹಿಳಾ ಕೊಲೆ ಅಪರಾಧಿಗಳನ್ನು ಯಾವುದೇ ಅಧಿಕೃತ ಕಾರ್ಯವಿಧಾನ ಪಾಲಿಸದೆ ಜೈಲಿನಿಂದ ಹೊರಗೆ ಕರೆದೊಯ್ದ ಆರೋಪ ದಿವ್ಯಾ ಚೌಧರಿ ಮೇಲಿದೆ. ಜೈಲು ಸಿಬ್ಬಂದಿ ತೀವ್ರ ವಿರೋಧ ವ್ಯಕ್ತಪಡಿಸಿದರೂ ಲೆಕ್ಕಿಸದೆ, ತನ್ನ ಸ್ವಂತ ಕಾರಿನಲ್ಲಿ ಇಬ್ಬರು ಅಪರಾಧಿಗಳನ್ನು ಮನೆಗೆ ಕರೆದೊಯ್ದು ಶುಚಿಗೊಳಿಸುವಿಕೆ ಹಾಗೂ ಮನೆಗೆಲಸ ಮಾಡಿಸಿಕೊಂಡಿದ್ದರು.
ಅಲ್ಲದೆ, ಕರ್ತವ್ಯದಲ್ಲಿದ್ದ ಸಿಬ್ಬಂದಿ ಪ್ರಶ್ನಿಸಿದಾಗ ಜೈಲರ್ ದಿವ್ಯಾ ಚೌಧರಿ ಅವರು ಸಿಬ್ಬಂದಿಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಜೈಲು ಸಿಬ್ಬಂದಿಯ ದೂರಿನ ಮೇರೆಗೆ ಆಗಸ್ಟ್ 5 ರಂದು ಎಫ್ಐಆರ್ ದಾಖಲಾಗಿತ್ತು. ಸರ್ಕಾರದ ಪ್ರಾಸಿಕ್ಯೂಷನ್ ಅನುಮತಿ ದೊರೆತ ಬಳಿಕ ಪೊಲೀಸರು ಬಲೆ ಬೀಸಿದ್ದರು.
ಜೈಲರ್ಗೆ ಇಬ್ಬರು ಅಪರಾಧಿಗಳನ್ನು ಮನೆಗೆ ಕರೆದೊಯ್ಯಲು ಸಹಾಯ ಮಾಡಿದ್ದ ಸಹ-ಆರೋಪಿ ಜೈಲು ಸಿಬ್ಬಂದಿ ಸೋನಿಯಾ ಚೌಧರಿ ಎಂಬಾಕೆ ಇನ್ನೂ ತಲೆಮರೆಸಿಕೊಂಡಿದ್ದಾರೆ. ಘಟನೆ ಬೆನ್ನಲ್ಲೇ ಇಬ್ಬರನ್ನೂ ಅಮಾನತುಗೊಳಿಸಿ ಬಿಕಾನೆರ್ ಕೇಂದ್ರ ಕಾರಾಗೃಹಕ್ಕೆ ವರದಿ ಮಾಡಲು ಆದೇಶಿಸಲಾಗಿದ್ದರೂ, ಅವರು ಹಾಜರಾಗಿರಲಿಲ್ಲ. ಪ್ರಸ್ತುತ ದಿವ್ಯಾ ಚೌಧರಿ ಅವರನ್ನು ಬಂಧಿಸಿರುವ ಪೊಲೀಸರು, ತಲೆಮರೆಸಿಕೊಂಡಿರುವ ಸೋನಿಯಾಳಿಗಾಗಿ ಶೋಧ ಮುಂದುವರಿಸಿದ್ದಾರೆ.








