ಕೊಚ್ಚಿನ್ : ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಅಥಣಿ ಸಿಗ್ನಲ್ ಬಳಿ ಬೆಳಗಿನ ಜಾವ ಅತಿವೇಗವಾಗಿ ಬಂದ ಐಷಾರಾಮಿ ಕಾರೊಂದು ಸ್ಕೂಟರ್ಗೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ, ಸುಳ್ಯ ಮೂಲದ ಯುವಕ ಸೇರಿ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಡಿಕ್ಕಿಯ ತೀವ್ರತೆಗೆ ಐಷಾರಾಮಿ ಕಾರು ದ್ವಿಚಕ್ರ ವಾಹನವನ್ನು ರಸ್ತೆಯುದ್ದಕ್ಕೂ ಸುಮಾರು 100 ಮೀಟರ್ಗಳಷ್ಟು ದೂರಕ್ಕೆ ಎಳೆದುಕೊಂಡು ಹೋಗಿ ನಿಂತಿದೆ. ಅಪಘಾತದಲ್ಲಿ ಮೃತಪಟ್ಟ ಮೂವರೂ 21 ವರ್ಷದ ಯುವಕ-ಯುವತಿಯರಾಗಿದ್ದು, ತ್ರಿಕ್ಕಾಕರದ ಖಾಸಗಿ ವಾಣಿಜ್ಯ ಸಂಸ್ಥೆಯೊಂದರಲ್ಲಿ ಸಹೋದ್ಯೋಗಿಗಳಾಗಿದ್ದರು.
ಸುಳ್ಯ ನಿವಾಸಿ ಇಬ್ರಾಹಿಂ ಅವರ ಪುತ್ರ ಇಯಾಸ್ (21), ವಯನಾಡಿನ ಮಡಕ್ಕಿಮಲದ ಸಂತೋಷ್ ಭವನದ ನಿವಾಸಿ ದೇವಿಕಾ (21),ಪಾಲಕ್ಕಾಡ್ನ ಕರಿಂಬಾದ ಪ್ರದೀಪ್ ಕುಮಾರ್ ಅವರ ಪುತ್ರಿ ಗೋಪಿಕಾ (21) ಎಂದು ಗುರುತಿಸಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ವಿಮಾನ ನಿಲ್ದಾಣದ ಕಡೆಯಿಂದ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಐಷಾರಾಮಿ ಕಾರು ಸ್ಕೂಟರ್ಗೆ ನೇರವಾಗಿ ಢಿಕ್ಕಿ ಹೊಡೆದಿದೆ. ಅಪಘಾತದ ಬೆನ್ನಲ್ಲೇ ‘ಸುಹೈಲ್’ ಎಂದು ಗುರುತಿಸಲಾದ ಕಾರು ಚಾಲಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಅಪಘಾತದ ಭೀಕರತೆ ಕಂಡ ಸ್ಥಳೀಯ ನಿವಾಸಿಗಳು ಆತನನ್ನು ಬೆನ್ನಟ್ಟಿ ತಡೆದು ನಿಲ್ಲಿಸಿದ್ದಾರೆ. ಸ್ಥಳೀಯರು ಕಾರು ಚಾಲಕ ಮದ್ಯ ಅಥವಾ ಮಾದಕ ದ್ರವ್ಯ (ಡ್ರಗ್ಸ್) ಸೇವಿಸಿದ್ದ ಎಂದು ಆರೋಪಿಸಿದ್ದಾರೆ. ಮೂವರು ಯುವಕರ ಪ್ರಾಣ ಹೋಗಿದ್ದರೂ ಕನಿಷ್ಠ ಪಶ್ಚಾತ್ತಾಪ ವ್ಯಕ್ತಪಡಿಸದ ಚಾಲಕ, ಸ್ಥಳೀಯರೊಂದಿಗೆ ತೀವ್ರ ವಾಗ್ವಾದಕ್ಕಿಳಿದು “ನನ್ನ ಕುಟುಂಬ ಏನೇ ಆದರೂ ಅದನ್ನು ನಿಭಾಯಿಸುತ್ತದೆ!” ಎಂದು ತೀವ್ರ ದುರಹಂಕಾರದ ಮಾತುಗಳನ್ನಾಡಿದ್ದಾನೆ.
ನಾವು ಹತ್ತಿರದಲ್ಲಿ ಸ್ನೇಹಿತರೊಂದಿಗೆ ನಿಂತಿದ್ದಾಗ ಕಿವುಡುಗೊಳಿಸುವ ಭೀಕರ ಶಬ್ದ ಕೇಳಿಸಿತು. ತಕ್ಷಣ ಸ್ಥಳಕ್ಕೆ ಓಡಿ ಬಂದಾಗ ಮೂವರು ಯುವಕರು ರಕ್ತದ ಮಡುವಿನಲ್ಲಿ ರಸ್ತೆಯಲ್ಲಿ ಬಿದ್ದಿದ್ದರು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಆಂಬ್ಯುಲೆನ್ಸ್ಗೆ ಕರೆ ಮಾಡಿದೆವು. ಕಾರಿನಿಂದ ಹೊರಬಂದ ಚಾಲಕ ಪೊಲೀಸರು ಬರುವವರೆಗೂ ಜನರ ಮೇಲೆ ಆಕ್ರಮಣಕಾರಿಯಾಗಿ ರೇಗಾಡುತ್ತಿದ್ದ” ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ನೆಡುಂಬಸ್ಸೆರಿ ಪೊಲೀಸರು ಆರೋಪಿ ಚಾಲಕ ಸಜೀವ್/ಸುಹೈಲ್ನನ್ನು ವಶಕ್ಕೆ ಪಡೆದಿದ್ದಾರೆ. ಮೃತದೇಹಗಳನ್ನು ಶವಪರೀಕ್ಷೆಗೆ ರವಾನಿಸಲಾಗಿದ್ದು, ಚಾಲಕ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುತ್ತಿದ್ದನೇ ಎಂಬ ಬಗ್ಗೆ ವೈದ್ಯಕೀಯ ತನಿಖೆ ಹಾಗೂ ಪ್ರಕರಣದ ಸುದೀರ್ಘ ತನಿಖೆ ಮುಂದುವರಿದಿದೆ.








