ಚಿತ್ರದುರ್ಗ: ಭರ್ಜರಿ ಕಾರ್ಯಾಚರಣೆ ನಡೆಸಿರುವ ಚಿತ್ರದುರ್ಗ ಪೊಲೀಸರು, ಅಂತಾರಾಜ್ಯ ಕಳ್ಳಿಯರ ತಂಡವನ್ನು ಖೆಡ್ಡಾಕ್ಕೆ ಬೀಳಿಸಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್ಟಿಸಿ) ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಂದ 6.3 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದ ಆರೋಪದ ಮೇಲೆ ಆಂಧ್ರಪ್ರದೇಶದ ಇಬ್ಬರು ಮಹಿಳೆಯರನ್ನು ಚಳ್ಳಕೆರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ತಾಲ್ಲೂಕಿನ ನಿವಾಸಿಗಳಾದ ಶಾಂತಿ ಮತ್ತು ನೀಲವೇಣಿ ಎಂದು ಗುರುತಿಸಲಾಗಿದೆ.
ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳ್ಳತನ
ಪೊಲೀಸರ ಪ್ರಕಾರ, ರಾಯಚೂರು ಜಿಲ್ಲೆಯ ಸಿಂಧನೂರು ನಿವಾಸಿ ಲಕ್ಷ್ಮಿ ಅವರು ಸಂಬಂಧಿಕರ ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಳ್ಳಲು ಜುಲೈ 6ರಂದು ಚಳ್ಳಕೆರೆಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಆರೋಪಿಗಳು ಅವರ ಗಮನವನ್ನು ಬೇರೆಡೆ ಸೆಳೆದು, ಬ್ಯಾಗ್ನಲ್ಲಿದ್ದ ಹರಳುಗಳನ್ನು ಹೊಂದಿದ 35 ಗ್ರಾಂ ತೂಕದ ಚಿನ್ನದ ಸರ, ಪೆಂಡೆಂಟ್ ಹಾಗೂ ಮೂರು ಗ್ರಾಂ ತೂಕದ ಒಂದು ಜೋಡಿ ಚಿನ್ನದ ಗುಂಡಿನಾಕಾರದ ಕಿವಿಯೋಲೆಗಳನ್ನು ಕದ್ದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಾಹಿತಿ ಮತ್ತು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಚಳ್ಳಕೆರೆ ಉಪವಿಭಾಗದ ಡಿವೈಎಸ್ಪಿ ಸತ್ಯನಾರಾಯಣ ರಾವ್ ಅವರ ಮಾರ್ಗದರ್ಶನದಲ್ಲಿ, ಇನ್ಸ್ಪೆಕ್ಟರ್ ಕುಮಾರ್ ಕೆ. ನೇತೃತ್ವದ ಪೊಲೀಸ್ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಆರೋಪಿಗಳ ವಿರುದ್ಧ ಚಳ್ಳಕೆರೆ ಮತ್ತು ಮೊಳಕಾಲ್ಮೂರು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 55 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಚಳ್ಳಕೆರೆ ಪ್ರಕರಣಕ್ಕೆ ಸಂಬಂಧಿಸಿದಂತೆ 4.3 ಲಕ್ಷ ರೂಪಾಯಿ ಮೌಲ್ಯದ 38 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ 2 ಲಕ್ಷ ರೂಪಾಯಿ ಮೌಲ್ಯದ 17 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.








