ಕೊಪ್ಪಳ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ತಾಣ ಅಂಜನಾದ್ರಿ ಬೆಟ್ಟದ ದೇವಸ್ಥಾನದ ಆಡಳಿತ ವಿಚಾರ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಅಂಜನಾದ್ರಿ ಪರ್ವತದ ಅರ್ಚಕ ವಿದ್ಯಾದಾಸ್ ಬಾಬಾ ವಿರುದ್ಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನಲೆ ಗಂಗಾವತಿ ತಹಶೀಲ್ದಾರ್ ವಿನಾಯಕ್ ನೀಡಿದ ದೂರಿನನ್ವಯ ಕೇಸ್ ದಾಖಲಿಸಲಾಗಿದೆ.
ಇನ್ನು ಜೂನ್ 13ರ ಸಂಜೆ 4-30 ಗಂಟೆ ಸುಮಾರಿಗೆ ಆಂಜನಾದ್ರಿ ಬೆಟ್ಟದ ಸಿಬ್ಬಂದಿ ವೆಂಕಟೇಶ್ ನನಗೆ ಕರೆ ಮಾಡಿ ತಿಳಿಸಿದ್ದೆನೆಂದರೆ ‘ವಿದ್ಯಾದಾಸ್ ಬಾಬ ಅವರು ನಮಗೆ ಕಾರ್ಯಲಯದಿಂದ ನಮ್ಮನ್ನು ಹೊರಗಡೆ ಹಾಕಿ ಬೀಗ ಹಾಕಿದ್ದು, ಹಾಗೂ ಇತರೆ ಎಲ್ಲಾ ರೂಮ್ಗಳಿಗೆ ಬೀಗ ಹಾಕಿದ್ದಾರೆ. ನಮ್ಮ ಮಾತು ಕೇಳುತ್ತಿಲ್ಲ, ನಿಮಗೂ, ಅಂಜನಾದ್ರಿ ಬೆಟ್ಟಕ್ಕೆ ಸಂಬಂಧ ಇರವುದಿಲ್ಲ ಎಂದು ಕೂಗಾಡುತ್ತಿದ್ದಾರೆ. ನೀವು ಕೂಡಲೇ ಬನ್ನಿ ಅಂತಾ ತಿಳಿಸಿದ್ದರಿಂದ ನಾನು ಮತ್ತು ನಮ್ಮ ಸಿಬ್ಬಂದಿ ರವಿಕುಮಾರ ನಾಯ್ಕವಾಡಿ, ಮಹೇಶ ದಾಲಾಲ್, ಚನ್ನಪ್ಪ ಭೇಟಿ ನೀಡಿದ್ದೇವೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಿಬ್ಬಂದಿಯನ್ನ ಕಾರ್ಯಾಲಯದಿಂದ ಹೊರಹಾಕಿದ ಬಾಬಾ
‘ಸಿಬ್ಬಂದಿ ಮತ್ತು ಇತರರನ್ನು ವಿಚಾರಣೆ ಮಾಡಲಾಗಿದ್ದು, ಇವರು ತಿಳಿಸಿದ್ದನೆಂದರೆ ಸಂಜೆ 4-15 ಗಂಟೆ ಸುಮಾರಿಗೆ ನಾವು ನಮ್ಮ ಕಾರ್ಯಾಲಯದಲ್ಲಿ ಕೆಲಸ ಮಾಡುತ್ತಿರುವಾಗ ವಿದ್ಯಾದಾಸ್ ಬಾಬಾ ಏಕಾಏಕಿ ಪ್ರವೇಶಿಸಿ ಕೆಲಸ ಮಾಡದಂತೆ ತಕರಾರು ಮಾಡಿದ್ದು, ಜೊತೆಗೆ ಕಾರ್ಯಾಲಯದಿಂದ ಹೊರಗಡೆ ಹಾಕಿ ಬೀಗ ಹಾಕಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ನಾನೇ ಅಂಜನಾದ್ರಿ ಬೆಟ್ಟಕ್ಕೆ ವಾರಸುದಾರ ಎಂದ ಬಾಬಾ
‘ನಂತರ ನಾನು ಮತ್ತು ಸಿಬ್ಬಂದಿ ವಿದ್ಯಾದಾಸ್ ಬಾಬಾ ಅವರಿಗೆ ಕಾರ್ಯಾಲಯದ ಬೀಗ ತೆಗೆಯಲು ಹೇಳಿದಾಗ ಅವರು ನ್ಯಾಯಾಲಯದಲ್ಲಿ ನನ್ನ ಪರವಾಗಿ ಆದೇಶವಾಗಿದೆ. ನಾನೇ ಅಂಜನಾದ್ರಿ ಬೆಟ್ಟಕ್ಕೆ ವಾರಸುದಾರ, ನಿಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ, ಇಲ್ಲಿಂದ ಹೊರಟು ಹೋಗಿ’ ಎಂದಿದ್ದಾರೆ. ‘ಜೊತೆಗೆ ಕಾರ್ಯಾಲಯದಲ್ಲಿ ಹೋಗದಂತೆ ತಡೆದು ಕರ್ತವ್ಯ ನಿರ್ವಹಿಸದಂತೆ ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿರುತ್ತಾನೆ. ಹೀಗಾಗಿ ವಿದ್ಯಾದಾಸ್ ಬಾಬಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.








