ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ ಬಾಳಾಲ್ ಪಂಚಾಯತ್ ವ್ಯಾಪ್ತಿಯಲ್ಲಿ ಬಾವಿಗೆ ಬಿದ್ದ 62 ವರ್ಷದ ಮಹಿಳೆಯನ್ನು ರಕ್ಷಿಸಲು ಆಟೋ ಚಾಲಕನೊಬ್ಬ ತನ್ನ ಜೀವದ ಹಂಗು ತೊರೆದು ಬಾವಿಗೆ ಇಳಿದ ಘಟನೆ ನಡೆದಿದೆ. ಸುಮಾರು 16 ಅಡಿ ಆಳದ ಬಾವಿಯಲ್ಲಿ ನೀರಿನ ಮಟ್ಟದ ನಡುವೆ ಮಹಿಳೆಯನ್ನು ಸುಮಾರು ಒಂದು ಗಂಟೆ ಕಾಲ ಮೇಲಕ್ಕೆ ಹಿಡಿದುಕೊಂಡು ನಿಂತಿದ್ದ ಚಾಲಕನಿಗೆ ಬಳಿಕ ಮತ್ತೊಬ್ಬ ವ್ಯಕ್ತಿ ನೆರವಾಗಿದ್ದಾರೆ. ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮಹಿಳೆ ಸೇರಿದಂತೆ ಇಬ್ಬರನ್ನೂ ಸುರಕ್ಷಿತವಾಗಿ ಮೇಲಕ್ಕೆ ಕರೆತಂದಿದ್ದಾರೆ.
ಮಲ್ಲೋಮ್ನ 55 ವರ್ಷದ ಆಟೋ ಚಾಲಕ ಪಪ್ಪಚ್ಚನ್ ಕೊನೂರ್ ಗುರುವಾರ ಸಂಜೆ ನಟ್ಟಕ್ಕಲ್ನ ಎಲಮ್ಮ ಅಂಬಟ್ಟುಪರಂಬಿಲ್ ಅವರ ಮನೆಗೆ ಹೋಗಿದ್ದರು. ಮೂರು ತಿಂಗಳ ಹಿಂದೆ ನಿಧನರಾದ ಅವರ ಪತಿ ಮತ್ತು ಎಲಮ್ಮ ಅವರ ಜಂಟಿ ಫೋಟೋವನ್ನು ಫ್ರೇಮ್ ಮಾಡಿಸಿ ತಲುಪಿಸಲು ಚಾಲಕ ಬಂದಿದ್ದರು. ಸಂಜೆ ಸುಮಾರು 5.15ಕ್ಕೆ ಅವರು ಮನೆ ತಲುಪಿದಾಗ, ಎಲಮ್ಮ ಅವರು ನೆರೆಮನೆಯವರ ಮಗಳೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದರು. ಅದೇ ವೇಳೆ ಎಲಮ್ಮ ಅವರ ಸ್ನೇಹಿತೆ ವಲಿಯಪರಂಬತ್ ಎಲಿಯಮ್ಮ (62) ಬಾವಿಗೆ ಬಿದ್ದಿರುವ ವಿಷಯ ತಿಳಿದುಬಂದಿದೆ. ತಕ್ಷಣ ಪಪ್ಪಚ್ಚನ್ ಮತ್ತು ಎಲಮ್ಮ ಅವರ ಮಗಳು, ಸುಮಾರು 50 ಮೀಟರ್ ದೂರದಲ್ಲಿದ್ದ ಎಲಿಯಮ್ಮ ಅವರ ಮನೆಗೆ ಓಡಿದ್ದಾರೆ.
ಬಾವಿಯೊಳಗೆ ಎಲಿಯಮ್ಮ ನೀರಿನಲ್ಲಿ ಮುಳುಗುತ್ತಾ ಮೇಲೇಳುತ್ತಾ ಒದ್ದಾಡುತ್ತಿದ್ದರು. ಅವರ ಪತಿ ವರ್ಗೀಸ್ ಅಸಹಾಯಕರಾಗಿ ನಿಂತಿದ್ದರೆ, ಮಗಳು ನೆರವಿಗಾಗಿ ಕಿರುಚುತ್ತಿದ್ದರು. ಕ್ಷಣವೂ ತಡಮಾಡದ ಪಪ್ಪಚ್ಚನ್, ನೀರು ಎತ್ತುವ ಮೋಟರ್ಗೆ ಕಟ್ಟಿದ್ದ ಹಗ್ಗದ ಸಹಾಯದಿಂದ ಬಾವಿಗೆ ಇಳಿದರು. ನೀರು ತಲೆಯ ಮಟ್ಟದವರೆಗೆ ಇದ್ದುದರಿಂದ ನಿಂತುಕೊಳ್ಳಲು ಸರಿಯಾದ ಆಧಾರವೂ ಸಿಗುತ್ತಿರಲಿಲ್ಲ. ಆದರೂ ಎಲಿಯಮ್ಮ ಅವರ ತಲೆ ನೀರಿನಲ್ಲಿ ಮುಳುಗದಂತೆ ಹಿಡಿದುಕೊಂಡು ಸಹಾಯ ಬರುವವರೆಗೆ ಕಾದರು.
ಸುಮಾರು 50 ನಿಮಿಷಗಳ ಬಳಿಕ ಪಪ್ಪಚ್ಚನ್ ದೈಹಿಕವಾಗಿ ಬಳಲತೊಡಗಿದರು. ಇದನ್ನು ಗಮನಿಸಿದ 60ರ ಹರೆಯದ ಕೂಲಿ ಕಾರ್ಮಿಕ ಮೋನಿ ಕೂಡ ಬಾವಿಗೆ ಇಳಿದು ಅವರಿಗೆ ನೆರವಾದರು. ಇಬ್ಬರೂ ಸೇರಿ ಮಹಿಳೆಯ ತಲೆಯನ್ನು ನೀರಿನ ಮೇಲೆಯೇ ಹಿಡಿದುಕೊಂಡಿದ್ದರು. ಸ್ಥಳೀಯರಾದ ರಾಹುಲ್ ಅಥಿಕ್ಕಲ್ ಅಗ್ನಿಶಾಮಕ ದಳ, ಪೊಲೀಸರು ಮತ್ತು ಆಂಬುಲೆನ್ಸ್ಗೆ ಕರೆ ಮಾಡಿದ್ದರು. ಸುಮಾರು 33 ಕಿ.ಮೀ. ದೂರದಲ್ಲಿರುವ ಚೀಮೇನಿ ಅಗ್ನಿಶಾಮಕ ಮತ್ತು ರಕ್ಷಣಾ ಘಟಕದ ಸಿಬ್ಬಂದಿ ಸಂಜೆ 6.13ಕ್ಕೆ ಸ್ಥಳಕ್ಕೆ ತಲುಪಿದರು.
ರಕ್ಷಣಾ ಸಿಬ್ಬಂದಿ ಬಲೆಯಿರುವ ಬುಟ್ಟಿಯನ್ನು ಬಾವಿಗೆ ಇಳಿಸಿ ಮೊದಲು ಎಲಿಯಮ್ಮ ಅವರನ್ನು ಮೇಲಕ್ಕೆತ್ತಿದರು. ಬಳಿಕ ದೈಹಿಕವಾಗಿ ಸಂಪೂರ್ಣ ಬಳಲಿದ್ದ ಪಪ್ಪಚ್ಚನ್ ಮತ್ತು ಮೋನಿಯನ್ನೂ ಸುರಕ್ಷಿತವಾಗಿ ಮೇಲಕ್ಕೆ ಕರೆತಂದರು. ಎಲಿಯಮ್ಮ ಅವರು ಆಲ್ಝೈಮರ್ಸ್ ಕಾಯಿಲೆಯಿಂದ ಬಳಲುತ್ತಿದ್ದು, ಇತ್ತೀಚೆಗಷ್ಟೇ ಪರಿಯಾರಂನ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 10 ದಿನಗಳ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಮನೆಗೆ ಬಂದ ಸ್ವಲ್ಪ ಸಮಯದಲ್ಲೇ ಅವರು ಬಾವಿಗೆ ಬಿದ್ದಿದ್ದಾರೆ. ಬಾವಿಯ ಸುತ್ತಲಿನ ತಡೆಗೋಡೆ ಮೊಣಕಾಲಿನ ಎತ್ತರದಲ್ಲಷ್ಟೇ ಇದ್ದುದರಿಂದ, ಕಾಯಿಲೆಯ ಕಾರಣದಿಂದ ಬಾವಿಯಿರುವುದನ್ನು ಮರೆತು ಬಿದ್ದಿರಬಹುದು ಎಂದು ನೆರೆಮನೆಯವರು ತಿಳಿಸಿದ್ದಾರೆ.
ಎಲಿಯಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಮೂಳೆ ಮುರಿತವಾಗಿಲ್ಲ ಮತ್ತು ಆರೋಗ್ಯ ಸ್ಥಿರವಾಗಿದೆ ಎಂದು ಹಿರಿಯ ಅಗ್ನಿಶಾಮಕ ಅಧಿಕಾರಿ ವಿನೀಶ್ ಕುಮಾರ್ ಕೆ. ತಿಳಿಸಿದ್ದಾರೆ.
ಪಪ್ಪಚ್ಚನ್ ಅನುಭವಿ ಈಜುಗಾರರಾಗಿದ್ದು, ತಮ್ಮ ಮನೆಯ ಬಾವಿಯನ್ನು ತಾವೇ ಸ್ವಚ್ಛಗೊಳಿಸುತ್ತಿದ್ದರು. ಮಹಿಳೆಯ ಜೀವ ಉಳಿಸಲು ಬಾವಿಗೆ ಇಳಿಯುವಾಗ ಅವರು ಕ್ಷಣಕಾಲವೂ ಯೋಚಿಸಿರಲಿಲ್ಲ. ಆದರೆ ರಕ್ಷಣೆಯ ಬಳಿಕ ಅವರ ದೇಹದಲ್ಲಿ ನೋವು ಕಾಣಿಸಿಕೊಂಡಿದೆ. ಜೇಬಿನಲ್ಲಿದ್ದ ದಿನದ ದುಡಿಮೆಯ ಹಣ, ಗುರುತಿನ ಚೀಟಿಗಳು ಮತ್ತು ಇತರ ದಾಖಲೆಗಳೂ ನೀರಿನಲ್ಲಿ ನೆನೆದಿದ್ದವು.
ಯೋಚಿಸದೆ ಬಾವಿಗೆ ಹಾರಿದೆ. ನನ್ನ ಜೇಬಿನಲ್ಲಿದ್ದ ಹಣವೆಲ್ಲ ನೆನೆದಿದೆ. ಅದೃಷ್ಟವಶಾತ್ ಮೊಬೈಲ್ ಫೋನ್ ಆಟೋದಲ್ಲೇ ಉಳಿದಿತ್ತು,” ಎಂದು ಪಪ್ಪಚ್ಚನ್ ಹೇಳಿದ್ದಾರೆ.
ಒಂದು ದಿನ ಮುಂಚಿತವಾಗಿ ಫೋಟೋ ತಲುಪಿಸಲು ಸಾಧ್ಯವಾಗದಿದ್ದರೂ, ಅದೇ ವಿಳಂಬದಿಂದ ಮತ್ತೊಂದು ಜೀವ ಉಳಿಸುವ ಅವಕಾಶ ಸಿಕ್ಕಿತು ಎಂಬ ಅವರ ಮಾತು ಮಾನವೀಯತೆಯ ಮಹತ್ವವನ್ನು ಸಾರುತ್ತದೆ.








