ಉಡುಪಿ: ನಿಷೇಧಿತ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಅಜ್ಜರಕಾಡಿನ ಭುಜಂಗ ಪಾರ್ಕ್ ಬಳಿ ಅಕ್ಟೋಬರ್ 17ರ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು 85,000 ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ಉದ್ಯಾವರದ ಅಂಕುದ್ರು ನಿವಾಸಿ ವಿಜಯ್ ಪೂಜಾರಿ (36) ಎಂದು ಗುರುತಿಸಲಾಗಿದೆ.
ಉಡುಪಿ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಭರತೇಶ್ ಕಂಕಣವಾಡಿ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ, ಪೊಲೀಸರು ಸ್ಕೂಟರ್ನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿಜಯ್ ಪೂಜಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ನಡೆಸಿದ ತಪಾಸಣೆಯಲ್ಲಿ ಸ್ಕೂಟರ್ನ ಡಿಕ್ಕಿಯಲ್ಲಿ ಎಂಡಿಎಂಎ ಪತ್ತೆಯಾಗಿದೆ.
ಪೊಲೀಸರು 35,000 ರೂ. ಮೌಲ್ಯದ 17.66 ಗ್ರಾಂ ತೂಕದ ಮಾದಕ ವಸ್ತು, ತೂಕ ಮಾಡುವ ಯಂತ್ರ, 2.18 ಗ್ರಾಂ ತೂಕದ ಬಿಳಿ ಬಣ್ಣದ ಮಾತ್ರೆಗಳು ಮತ್ತು ಪುಡಿ, ಒಂದು ಸ್ಕೂಟರ್ ಹಾಗೂ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ಅಂದಾಜು 85,000 ರೂ. ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ವಿರುದ್ಧ ಈಗಾಗಲೇ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ಹಾಗೂ ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿವೆ. ಈತ ಸೆಪ್ಟೆಂಬರ್ 24ರಂದು ಹಿರಿಯಡ್ಕ ಜೈಲಿನಿಂದ ಬಿಡುಗಡೆಗೊಂಡಿದ್ದನು.
ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ, ಉಡುಪಿ ನಗರ ಪೊಲೀಸ್ ಠಾಣೆಯ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಉಪನಿರೀಕ್ಷಕರಾದ ಭರತೇಶ್ ಕಂಕಣವಾಡಿ ಮತ್ತು ರತ್ನಾಕರ್ ಕೆ ಹಾಗೂ ಪೊಲೀಸ್ ಸಿಬ್ಬಂದಿಯಾದ ಜೀವನ್ ಕುಮಾರ್, ಆನಂದ ಗಾಣಿಗ, ಪ್ರಸನ್ನ ಸಿ, ಹೇಮಂತ್ ಮತ್ತು ಒಬಳೇಶ್ ಆನಂದಯ್ಯ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.








