ಮುಂಬೈ: ಮುಂಬೈನ ಜುಹು ಪ್ರದೇಶದಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ‘ಆಂಟಿ-ಗ್ಯಾಂಗ್ಸ್ಟರ್ ಟಾಸ್ಕ್ ಫೋರ್ಸ್’ (ATF) ಹಾಗೂ ರಾಜಸ್ಥಾನ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಓರ್ವ ಅಪ್ರಾಪ್ತ ಸೇರಿ ಮೂವರು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.
ಗುಂಡಿನ ದಾಳಿ ಎಸಗಿ ತಲೆಮರೆಸಿಕೊಂಡಿದ್ದ 17, 18 ಹಾಗೂ 22 ವರ್ಷ ವಯಸ್ಸಿನ ಮೂವರು ಆರೋಪಿಗಳು ವಸಾಯಿಯಲ್ಲಿ ರೈಲು ಹತ್ತಿ ಮುಂಬೈನಿಂದ ದೆಹಲಿಯತ್ತ ಪರಾರಿಯಾಗಲು ಯತ್ನಿಸುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು, ರಾಜಸ್ಥಾನದ ಕೋಟಾ ರೈಲು ನಿಲ್ದಾಣದಲ್ಲಿ ಈ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ರೈಲಿನಲ್ಲಿ ಪರಾರಿಯಾಗಲು ಯತ್ನ:
ಆರೋಪಿಗಳು ಮುಂಬೈನಿಂದ ರಾಜಸ್ಥಾನದ ಕಡೆಗೆ ತೆರಳಲು ಪುಣೆ-ಜೈಪುರ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ 12939) ರೈಲನ್ನು ಬಳಸಿದ್ದರು. ಈ ರೈಲು ವಸಾಯಿ ರಸ್ತೆಯಲ್ಲಿ ನಿಲುಗಡೆ ಹೊಂದಿದ್ದು, ಅಲ್ಲಿಂದ ಹತ್ತಿದ್ದ ಆರೋಪಿಗಳು ಕೋಟಾ ರೈಲು ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸದ್ಯ ವಶಕ್ಕೆ ಪಡೆದಿರುವ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.








