ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೋಳಿಯಾರಿನಲ್ಲಿ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಕೂಟರ್ ಸವಾರರು ಮೃತಪಟ್ಟ ಪ್ರಕರಣದಲ್ಲಿ, ಆರೋಪಿ ಮಹಮ್ಮದ್ ಹಫೀಜ್ನನ್ನು ಪೊಲೀಸರು ಸ್ಥಳ ಮಹಜರಿಗೆ ಕರೆದೊಯ್ದ ವೇಳೆ ಮೃತ ಯುವಕರ ಇಬ್ಬರು ಸ್ನೇಹಿತರು ಆತನ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರು ಪಂಚರು ಹಾಗೂ ತನಿಖೆಗೆ ಸಹಕರಿಸುವವರೊಂದಿಗೆ ಬೋಳಿಯಾರು ಗ್ರಾಮದ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಸಮೀಪ ಸ್ಥಳ ಮಹಜರು ನಡೆಸುತ್ತಿದ್ದರು. ಈ ವೇಳೆ ಮೃತರಾದ ಮೊಹಮ್ಮದ್ ಝುನೈದ್ ಮತ್ತು ಮೊಹಮ್ಮದ್ ಆಫ್ರಾಜ್ ಅವರ ಸ್ನೇಹಿತರಾದ ಅಬ್ದುಲ್ ರಹಿಮಾನ್ ಹಾಗೂ ಜಾಹೀರ್ ಏಕಾಏಕಿ ಆರೋಪಿ ಹಫೀಜ್ ಅಲಿಯಾಸ್ ಅಪ್ಪಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿದ್ದವರು ಮಧ್ಯಪ್ರವೇಶಿಸಿ ಅವರನ್ನು ತಡೆದಿದ್ದಾರೆ.
ಮೃತ ಸ್ನೇಹಿತರ ಸಾವಿನಿಂದ ಆಕ್ರೋಶಗೊಂಡಿದ್ದ ಯುವಕರು ಆರೋಪಿಯ ಮೇಲೆ ಹಲ್ಲೆಗೆ ಯತ್ನಿಸುವ ಮೂಲಕ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ವೈಷಮ್ಯದ ಹಿನ್ನೆಲೆಯಲ್ಲಿ ಪಿಕಪ್ ಚಾಲಕ ಹಫೀಜ್ ಸ್ಕೂಟರ್ನಲ್ಲಿ ತೆರಳುತ್ತಿದ್ದ ಝುನೈದ್ ಮತ್ತು ಆಫ್ರಾಜ್ಗೆ ಹಿಂದಿನಿಂದ ವಾಹನ ಡಿಕ್ಕಿ ಹೊಡೆಸಿ ಕೊಲೆ ಮಾಡಿದ್ದಾನೆ ಎಂಬ ಆರೋಪದಡಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.








