ಮಂಗಳೂರು: ನಗರದ ವಿವಾಹ ಸಮಾರಂಭವೊಂದರಲ್ಲಿ ಬಾಲಕಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಿದ್ದ ಕುಖ್ಯಾತ ಮಹಿಳಾ ಆರೋಪಿಯನ್ನು ಬರ್ಕೆ ಠಾಣೆಯ ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳ್ಳಾಲದ ನಿವಾಸಿ ಮಿನ್ನತ್ (42) ಬಂಧಿತೆ. ಆರೋಪಿಯಿಂದ ಕಳವು ಮಾಡಲಾಗಿದ್ದ 10 ಗ್ರಾಂ ತೂಕದ ಬಾಲಕಿಯ ಚಿನ್ನದ ಸರವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಅಕ್ಟೋಬರ್ 18ರಂದು ಮಂಗಳೂರಿನ ಕಲ್ಯಾಣ ಮಂಟಪವೊಂದರಲ್ಲಿ ನಡೆದ ವಿವಾಹ ಕಾರ್ಯಕ್ರಮದ ವೇಳೆ, ಜನದಟ್ಟಣೆಯ ಲಾಭ ಪಡೆದ ಅಪರಿಚಿತ ಮಹಿಳೆಯೊಬ್ಬಳು ಬಾಲಕಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದು ಪರಾರಿಯಾಗಿದ್ದಳು. ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಇತರೆ ಮಾಹಿತಿಗಳ ಆಧಾರದ ಮೇಲೆ ಆರೋಪಿ ಮಿನ್ನತ್ಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮಿನ್ನತ್ ವಿರುದ್ಧ ಈ ಹಿಂದೆಯೇ ಅಪರಾಧ ಚಟುವಟಿಕೆಗಳು ಇರುವುದು ತನಿಖೆಯಿಂದ ತಿಳಿದುಬಂದಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ 3 ಹಾಗೂ ಕೊಣಾಜೆ ಪೊಲೀಸ್ ಠಾಣೆಯಲ್ಲಿ 5 ಕಳವು ಪ್ರಕರಣಗಳು ಸೇರಿದಂತೆ ಒಟ್ಟು 9 ಪ್ರಕರಣಗಳು ಈಕೆಯ ವಿರುದ್ಧ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಸರಣಿ ಕೃತ್ಯಗಳಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಕಾನೂನು ಪ್ರಕಾರ ಕಲಂ 112 (ಸಂಘಟಿತ ಅಪರಾಧ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಈ ಪತ್ತೆ ಕಾರ್ಯದಲ್ಲಿ ಬರ್ಕೆ ಠಾಣೆಯ ಪಿಎಸ್ಐ ಗುರುಪ್ಪ ಕಾಂತಿ, ಪಿಎಸ್ಐ ವಿನಾಯಕ ತೋರಗಲ್ ಹಾಗೂ ಕ್ರೈಂ ವಿಭಾಗದ ಸಿಬ್ಬಂದಿ ಯಶಸ್ವಿಯಾಗಿ ಪಾಲ್ಗೊಂಡಿದ್ದರು.








