Author: admin
ಮಂಗಳೂರು: ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ನಡುವೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಕುಸಿತದ ಅಪಾಯ ಮತ್ತಷ್ಟು ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾಡಳಿತವು ಜಿಲ್ಲೆಯ 88 ಪ್ರದೇಶಗಳನ್ನು ಭೂಕುಸಿತ ಸಂಭವಿಸುವ ಅತಿ ಹೆಚ್ಚು ಅಪಾಯದ ವಲಯಗಳಾಗಿ (Danger Zone) ಗುರುತಿಸಿದ್ದು, ಸಾರ್ವಜನಿಕರು ಮಳೆಗಾಲದಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಿದೆ. ಅಧಿಕೃತ ಮಾಹಿತಿಯಂತೆ, ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ಪ್ರಕರಣಗಳಲ್ಲಿ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಸಕ್ತ ವರ್ಷದಲ್ಲಿಯೂ ಈಗಾಗಲೇ ಮೂರು ಮಂದಿ ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಅಪಾಯದ ಪಟ್ಟಿಯಲ್ಲಿ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್, ನೆರಿಯ, ಶಿಶಿಲ, ಮಂಗಳೂರು ಸಮೀಪದ ಕೆತ್ತಿಕಲ್, ಹಾಗೆಯೇ ಬಂಟ್ವಾಳ, ಪುತ್ತೂರು, ಸುಳ್ಯ, ಕಡಬ ಹಾಗೂ ಉಳ್ಳಾಲವ್ಯಾಪ್ತಿಯ ಹಲವು ಪ್ರದೇಶಗಳು ಸೇರಿವೆ. ಭೂಕುಸಿತದ ಅಪಾಯವನ್ನು ಅಧ್ಯಯನ ಮಾಡಲು ಐಐಟಿ ಧಾರವಾಡ ನಡೆಸಿದ ವೈಜ್ಞಾನಿಕ ಸಂಶೋಧನೆ ಹಾಗೂ ಕೃತಕ ಬುದ್ಧಿಮತ್ತೆ (AI) ಆಧಾರಿತ ವಿಶ್ಲೇಷಣೆಯ ವರದಿ ಪ್ರಕಾರ, ದಕ್ಷಿಣ ಕನ್ನಡ…
ಉಪ್ಪಿನಂಗಡಿ: ಮಠ ನಿವಾಸಿ ಆದಂ ಅವರ ಮನೆಯಲ್ಲಿ ಬುಧವಾರ ಸಂಜೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ. ಪ್ರಾಥಮಿಕ ಮಾಹಿತಿಯ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಲೇ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಬೆಂಕಿ ಅವಘಡದಲ್ಲಿ ಮನೆಯಲ್ಲಿದ್ದ ಟಿ.ವಿ., ವಿವಿಧ ವಿದ್ಯುತ್ ಉಪಕರಣಗಳು, ಕಪಾಟು, ಬಟ್ಟೆ, ಅಗತ್ಯ ದಾಖಲೆ ಪತ್ರಗಳು ಹಾಗೂ ಮನೆಯ ವಿದ್ಯುತ್ ಸಂಪರ್ಕದ ವೈರ್‌ಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಘಟನೆಯಿಂದ ಸುಮಾರು ರೂ. 3 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಘಟನೆ ನಡೆದ ವೇಳೆ ಮನೆಯ ಮಾಲೀಕ ಆದಂ ಅವರು ತಮ್ಮ ಪತ್ನಿಯನ್ನು ಔಷಧಕ್ಕಾಗಿ ಉಪ್ಪಿನಂಗಡಿಗೆ ಕರೆದುಕೊಂಡು ಹೋಗಿದ್ದರು. ಅವರೊಂದಿಗೆ ಪುತ್ರಿಯೂ ತೆರಳಿದ್ದರು. ಆ ಸಮಯದಲ್ಲಿ ಶಾಲೆಯಿಂದ ಬಂದಿದ್ದ ಮೊಮ್ಮಕ್ಕಳು ಮಾತ್ರ ಮನೆಯಲ್ಲಿ ಇದ್ದರು. ಮನೆಯೊಳಗೆ ಹೊಗೆ ಮತ್ತು ಬೆಂಕಿ ಕಾಣಿಸುತ್ತಿದ್ದಂತೆ ಮಕ್ಕಳು ತಕ್ಷಣ ಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳೀಯರು ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದರೆ…
ನವದೆಹಲಿ: ಮೂರು ದಿನಗಳ ಅಧಿಕೃತ ಭಾರತ ಪ್ರವಾಸಕ್ಕಾಗಿ ಜಪಾನ್ ಪ್ರಧಾನಿ ಸನಾಯೆ ತಕೈಚಿ ಅವರು ನವದೆಹಲಿಗೆ ಆಗಮಿಸಿದ್ದು, ರಾಷ್ಟ್ರಪತಿ ಭವನದಲ್ಲಿ ಅವರಿಗೆ ಸಾಂಪ್ರದಾಯಿಕ ಹಾಗೂ ಅದ್ಧೂರಿ ಸ್ವಾಗತ ಕೋರಲಾಯಿತು. ಭಾರತ ಮತ್ತು ಜಪಾನ್ ನಡುವಿನ ದೀರ್ಘಕಾಲದ ಸ್ನೇಹ ಹಾಗೂ ಕಾರ್ಯತಂತ್ರದ ಪಾಲುದಾರಿಕೆಗೆ ಈ ಭೇಟಿ ಮತ್ತಷ್ಟು ಬಲ ತುಂಬುವ ನಿರೀಕ್ಷೆ ಮೂಡಿಸಿದೆ. ಸ್ವಾಗತ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಸನಾಯೆ ತಕೈಚಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಉಭಯ ನಾಯಕರು ತಮ್ಮ ತಮ್ಮ ದೇಶಗಳ ಕೇಂದ್ರ ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ರಾಜತಾಂತ್ರಿಕ ನಿಯೋಗದ ಸದಸ್ಯರನ್ನು ಪರಸ್ಪರ ಪರಿಚಯಿಸಿಕೊಂಡರು. ಈ ಪ್ರವಾಸದ ಪ್ರಮುಖ ಆಕರ್ಷಣೆಯಾಗಿರುವ 16ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಉಭಯ ರಾಷ್ಟ್ರಗಳ ನಾಯಕರು ಭಾಗವಹಿಸಲಿದ್ದಾರೆ. ಶೃಂಗಸಭೆಯಲ್ಲಿ ರಕ್ಷಣಾ ಸಹಕಾರ, ತಂತ್ರಜ್ಞಾನ ಅಭಿವೃದ್ಧಿ, ಆರ್ಥಿಕ ಪಾಲುದಾರಿಕೆ, ಹೂಡಿಕೆ, ವ್ಯಾಪಾರ ವಿಸ್ತರಣೆ ಹಾಗೂ ಇಂಡೋ-ಪೆಸಿಫಿಕ್ ಪ್ರದೇಶದ ಭದ್ರತೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಯಲಿದೆ.…
ರಾಮನಗರ: ರಾಮನಗರ ಜಿಲ್ಲೆಯ ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣ ಗ್ರಾಮದ ಸಮೀಪದ ಕಾವೇರಿ ಕ್ರಷರ್ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಬಂಡೆ ಕುಸಿದು 7 ಮಂದಿ ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬುಧವಾರ ಮುಂಜಾನೆ ಸುಮಾರು 5 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಸುಮಾರು 40 ಅಡಿ ಎತ್ತರದಿಂದ ಬೃಹತ್ ಬಂಡೆ ಕುಸಿದ ಪರಿಣಾಮ ಭಾರೀ ಅನಾಹುತ ನಡೆದಿದೆ. ದುರಂತದ ವೇಳೆ ಕ್ವಾರಿಯಲ್ಲಿ ಸುಮಾರು 10 ರಿಂದ 15 ಮಂದಿ ಬಿಹಾರ ಮೂಲದ ಕಾರ್ಮಿಕರು ಹಾಗೂ 2 ರಿಂದ 3 ಮಂದಿ ಸ್ಥಳೀಯ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಹಿಟಾಚಿ ಯಂತ್ರದ ಮೂಲಕ ಕಾಮಗಾರಿ ನಡೆಯುತ್ತಿದ್ದಾಗ ಏಕಾಏಕಿ ಬಂಡೆ ಕುಸಿದು ಕಾರ್ಮಿಕರ ಮೇಲೆ ಬಿದ್ದಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ 5 ಮಂದಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಆರ್.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ. ದುರಂತದ…
ಬೆಂಗಳೂರು:ರಾಜ್ಯ ಸರ್ಕಾರವು ಸ್ಟೋನ್ ಕ್ರಷರ್ ಮಾಲೀಕರಿಗೆ ಸುಮಾರು ₹4,850 ಕೋಟಿ ರಾಯಲ್ಟಿ ಮತ್ತು ದಂಡ ಪಾವತಿಸುವಂತೆ ನೋಟಿಸ್ ನೀಡಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಕ್ರಷರ್ ಮಾಲೀಕರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಉದ್ಯಮಿಗಳು, ಸರ್ಕಾರ ತನ್ನ ಆದೇಶವನ್ನು ಹಿಂಪಡೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದ್ದಾರೆ. ಮುಷ್ಕರದ ಪರಿಣಾಮವಾಗಿ ಜಲ್ಲಿಕಲ್ಲು ಹಾಗೂ ಎಂ-ಸ್ಯಾಂಡ್ ಉತ್ಪಾದನೆ ಮತ್ತು ಸರಬರಾಜು ಸ್ಥಗಿತಗೊಂಡಿದ್ದು, ನಿರ್ಮಾಣ ಕ್ಷೇತ್ರದ ಮೇಲೆ ಅದರ ಪರಿಣಾಮ ಗೋಚರಿಸಲು ಆರಂಭವಾಗಿದೆ. ಬೆಂಗಳೂರು, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿನ ನೂರಾರು ಕ್ರಷರ್‌ಗಳು ಇಂದಿನಿಂದಲೇ ಕಾರ್ಯಾಚರಣೆ ನಿಲ್ಲಿಸಿವೆ. ಸರ್ಕಾರವು ಅವೈಜ್ಞಾನಿಕ ಹಾಗೂ ನಿಯಮಬಾಹಿರವಾಗಿ ಭಾರೀ ಪ್ರಮಾಣದ ದಂಡ ವಿಧಿಸಿದೆ ಎಂದು ಆರೋಪಿಸಿರುವ ಕ್ರಷರ್ ಮಾಲೀಕರು, ಈ ನಿರ್ಧಾರದಿಂದ ಮೆಟ್ರೋ ಸೇರಿದಂತೆ ಹಲವು ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೂ ತೀವ್ರ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ. ತುಮಕೂರು, ಮಂಡ್ಯ, ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿಯೂ ಮುಷ್ಕರದ…
ಶಿವಮೊಗ್ಗ: ಗಾಂಜಾ ಮಾರಾಟ ವಿರೋಧಿಸಿದ್ದಕ್ಕೆ ಅಜ್ಜಿಯನ್ನೇ ಹತ್ಯೆ ಮಾಡಿದ್ದ ಮೊಮ್ಮಗನ ಕಾಲಿಗೆ ಶಿವಮೊಗ್ಗ ಪೊಲೀಸರು ಗುಂಡೇಟು ನೀಡಿದ್ದಾರೆ. ಕೊಲೆ ಆರೋಪಿ ಕಿಶೋರ್ (28) ಕಾಲಿಗೆ ಶಿವಮೊಗ್ಗ ನಗರ ಹೊರವಲಯ ವಾಜಪೇಯಿ ಲೇಔಟ್‌ನಲ್ಲಿ ಪೊಲೀಸರು ಗುಂಡೇಟು ನೀಡಿದ್ದಾರೆ. ಆರೋಪಿ ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ. ತಕ್ಷಣವೇ ದೊಡ್ಡಪೇಟೆ ಇನ್‌ಸ್ಪೆಕ್ಟರ್ ಗಾಳಿಯಲ್ಲಿ ಫೈರ್ ಮಾಡಿ ಆರೋಪಿಗೆ ಎಚ್ಚರಿಕೆ ನೀಡಿದ್ದರು. ಮಾತು ಕೇಳದ ಹಿನ್ನೆಲೆಯಲ್ಲಿ ಕಿಶೋರ್ ಕಾಲಿಗೆ ಫೈರ್ ಮಾಡಿ ಬಂಧಿಸಿದ್ದಾರೆ. ಗಾಯಾಳು ಕಿಶೋರ್‌ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪೊಲೀಸ್ ಸಿಬ್ಬಂದಿ ಗಣೇಶ್ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ನಿನ್ನೆ ಸಂಜೆ ಗಾಂಜಾ ಗಲಾಟೆ ಭಾಗವಾಗಿ ಅಜ್ಜಿಯನ್ನ ಆರೋಪಿ ಕಿಶೋರ್ ಕೊಲೆ ಮಾಡಿದ್ದ. ಸುಶೀಲಮ್ಮ ತಲೆ ಮೇಲೆ ಕಲ್ಲು ಎತ್ತಿ ಹಾಕಿ, ಸಾಯಿಸಿದ್ದ. ಈತನ ಮೇಲೆ ಗಾಂಜಾ ಪೆಡ್ಲರ್ ಹಾಗೂ ಗಾಂಜಾ ಸೇವನೆ ಕೇಸ್ ಇತ್ತು.
ಮಂಗಳೂರು: ಗಂಜಿಮಠ ಮತ್ತು ಎಡಪದವು ಸೇತುವೆ ಸಂಪರ್ಕ ರಸ್ತೆಯಲ್ಲಿ ಕಳಪೆ ಕಾಮಗಾರಿ ಹಿನ್ನೆಲೆ ರಸ್ತೆ ಕುಸಿದಿದ್ದು, ಗುರುವಾರ ಮುಂಜಾನೆ ಲಾರಿಯೊಂದು ಭೂಕುಸಿತದ ಭಾಗದಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಹೈವೇ ಸೇತುವೆ ಸಮೀಪ ನಡೆದ ಈ ಘಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ರಸ್ತೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಶಾಶ್ವತ ಪರಿಹಾರ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಲಾರಿಯನ್ನು ಹೊರತೆಗೆಯುವ ಕಾರ್ಯ ನಡೆಸಲಾಗಿದ್ದು, ರಸ್ತೆ ಸುರಕ್ಷತೆ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳೂರು: ಕಳ್ಳತನ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಒಂಬತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಚಿತ್ತೂರು ನಿವಾಸಿ ಶ್ರೀನಿವಾಸುಲು ವಿ. ಬಂಧಿತ ಆರೋಪಿ. ಈತ ಧರ್ಮಸ್ಥಳ ಪೊಲೀಸ್ ಠಾಣೆಯ ಕ್ರೈಂ ನಂ. 169/2016 (ಭಾರತೀಯ ದಂಡ ಸಂಹಿತೆಯ ಸೆಕ್ಷನ್ 379 ಮತ್ತು 201ರ ಅಡಿಯಲ್ಲಿ) ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕಾಗಿದ್ದ ಆರೋಪಿಯಾಗಿದ್ದನು. ಧರ್ಮಸ್ಥಳ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ವೃಷಭ್ ಮತ್ತು ಚರಣ್ ರಾಜ್ ಅವರು ಜೂನ್ 30 ರಂದು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಜುಲೈ 1 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಭಾರೀ ಮಳೆಯ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಈ ಕಾರಣದಿಂದ ಜಿಲ್ಲಾಧಿಕಾರಿಗಳು ಜುಲೈ 2ರಂದು ಅಂಗನವಾಡಿ ಕೇಂದ್ರಗಳಿಂದ ಹಿಡಿದು ಪದವಿಪೂರ್ವ ಕಾಲೇಜುಗಳವರೆಗೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ. ಇದರ ನಡುವೆಯೇ ಕೆಲವು ಖಾಸಗಿ ಶಾಲೆ ಹಾಗೂ ಕಾಲೇಜುಗಳು ಜು.2ರಂದು ಎಂದಿನಂತೆ ತರಗತಿಗಳನ್ನು ನಡೆಸಲಿವೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತದ ರಜೆ ಆದೇಶವನ್ನು ಎಲ್ಲ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ನಿರ್ದೇಶನವನ್ನು ಉಲ್ಲಂಘಿಸಿ ಯಾವುದೇ ಶಾಲೆ ಅಥವಾ ಕಾಲೇಜು ತರಗತಿಗಳನ್ನು ನಡೆಸಿದರೆ ಸಂಬಂಧಿತ ಸಂಸ್ಥೆಗಳ ವಿರುದ್ಧ ಕಾನೂನುಬದ್ಧ ಹಾಗೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಜೆ ಘೋಷಿಸಲಾಗಿರುವುದರಿಂದ ಶಿಕ್ಷಣ ಸಂಸ್ಥೆಗಳು ಜಿಲ್ಲಾಡಳಿತದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಸಮೀಪ ಅನುಮಾನಾಸ್ಪದ ರೀತಿಯಲ್ಲಿ 27 ವರ್ಷದ ಯುವಕನ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ತಾಲೂಕಿನ ಕುವೆಟ್ಟು ಗ್ರಾಮದ ಶಕ್ತಿನಗರ ಸಮೀಪ ಇರುವ ಯನೋಪೊಯೋ ಖಾಸಗಿ ವಿದ್ಯುತ್ ಸಬ್‌ಸ್ಟೇಷನ್ ಜಾಗದಲ್ಲಿ ಮೃತದೇಹ ಪತ್ತೆಯಾಗಿದೆ. ಮೃತನನ್ನು ತಣ್ಣೀರುಪಂತ ಗ್ರಾಮದ ಕಲ್ಲೇರಿ ಜನತಾ ಕಾಲೋನಿ ನಿವಾಸಿ ಶರೀಫ್ ಕೆ. ಅವರ ಪುತ್ರ ಮುಸ್ತಾಕ್ (27) ಎಂದು ಗುರುತಿಸಲಾಗಿದೆ. ಮುಸ್ತಾಕ್ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಮಗನನ್ನು ಕೊಲೆ ಮಾಡಲಾಗಿದೆ ಎಂದು ಮೃತನ ತಂದೆ ಶರೀಫ್ ಶಂಕೆ ವ್ಯಕ್ತಪಡಿಸಿದ್ದು, ಪ್ರಕರಣದ ಕುರಿತು ಸಮಗ್ರ ಹಾಗೂ ಕೂಲಂಕುಶ ತನಿಖೆ ನಡೆಸುವಂತೆ ಪೊಲೀಸರನ್ನು ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಲು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆ ಪೂರ್ಣಗೊಂಡ ಬಳಿಕವೇ ಸಾವಿನ ಹಿಂದಿನ ನಿಖರ…



