ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್‌ನಿಂದ ಬಹಾಮಾಸ್‌ಗೆ ತೆರಳುತ್ತಿದ್ದ ಖಾಸಗಿ ‘ಲಿಯರ್‌ಜೆಟ್ 60’ ವಿಮಾನವೊಂದು ಫ್ಲೋರಿಡಾದ ಪಾಮ್ ಬೀಚ್ ಕೌಂಟಿಯ ಕ್ರೆಸ್ಟ್‌ಹಾವನ್ ವಸತಿ ಪ್ರದೇಶದಲ್ಲಿ ಭೀಕರವಾಗಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲಾ 9 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಸಿದ್ಧ ‘ಮಾರ್-ಎ-ಲಾಗೊ’ ರೆಸಾರ್ಟ್‌ನ ಕೆಲವೇ ಮೈಲುಗಳ ಅಂತರದಲ್ಲಿ ಈ ಭೀಕರ ದುರಂತ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ಹಾಗೂ ಮಾಧ್ಯಮಗಳು ದೃಢಪಡಿಸಿವೆ.
ಒಂಬತ್ತು ಮಂದಿ ಪ್ರಯಾಣಿಕರಿದ್ದ ವಿಮಾನವು ಅತ್ಯಂತ ವೇಗವಾಗಿ ನೆಲಕ್ಕೆ ಅಪ್ಪಳಿಸಿದ್ದು, ಬಿದ್ದ ಕೆಲವೇ ಕ್ಷಣಗಳಲ್ಲಿ ಭೀಕರವಾಗಿ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ. ಈ ದುರಂತದ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಫ್ಲೋರಿಡಾ ಪೊಲೀಸ್ ಹಾಗೂ ಅಗ್ನಿಶಾಮಕ ದಳ ತಕ್ಷಣವೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರಾದರೂ, ವಿಮಾನದಲ್ಲಿದ್ದ ಯಾರನ್ನೂ ಬದುಕಿಸಲು ಸಾಧ್ಯವಾಗಿಲ್ಲ.
ವಿಮಾನ ಪತನಗೊಂಡ ಕ್ರೆಸ್ಟ್‌ಹಾವನ್ ಪ್ರದೇಶವು ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೊ ನಿವಾಸದಿಂದ ಕೇವಲ 11 ಕಿಲೋಮೀಟರ್ (ಸುಮಾರು 7 ಮೈಲು) ದೂರದಲ್ಲಿದೆ.
ಘಟನೆ ಸಂಭವಿಸಿದ ಭಾನುವಾರ ಬೆಳಿಗ್ಗೆ ಡೊನಾಲ್ಡ್ ಟ್ರಂಪ್ ಅವರು ಇದೇ ಮಾರ್-ಎ-ಲಾಗೊ ನಿವಾಸದಲ್ಲಿದ್ದರು. ದುರಂತ ಸಂಭವಿಸುವುದಕ್ಕೂ ಕೇವಲ ಒಂದು ಗಂಟೆ ಮೊದಲು ಅವರು ಅಲ್ಲಿಂದ ನಿರ್ಗಮಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಅಪಘಾತ ನಡೆದ ಸಮಯದಲ್ಲಿ ಆ ವಲಯದಲ್ಲಿ ಭಾರಿ ಗಾಳಿ ಹಾಗೂ ಮುಸುಕಿನ ವಾತಾವರಣ ಸೇರಿದಂತೆ ತೀವ್ರ ಹವಾಮಾನ ವೈಪರೀತ್ಯ ಇತ್ತು ಎಂದು ವರದಿಯಾಗಿದೆ.
ಫ್ಲೋರಿಡಾದ ಪಾಮ್ ಬೀಚ್ ಕೌಂಟಿ ಆಡಳಿತ ಹಾಗೂ ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿಮಾನ ಪತನಕ್ಕೆ ತಾಂತ್ರಿಕ ದೋಷ ಅಥವಾ ಹವಾಮಾನ ವೈಪರೀತ್ಯವೇ ಕಾರಣವೇ ಎನ್ನುವುದರ ಕುರಿತು ಉನ್ನತ ಮಟ್ಟದ ತನಿಖೆ ಪ್ರಾರಂಭಿಸಿದ್ದಾರೆ.








