ಮಡಿಕೇರಿ: ಕೊಡಗು ಜಿಲ್ಲೆಯ ಹಾರಂಗಿ ಹಿನ್ನೀರಿನಲ್ಲಿ ಪ್ರವಾಸಿಗರ ವಿಹಾರಕ್ಕೆ ತೆರಳಿದ್ದ ಸ್ಪೀಡ್ ಬೋಟ್ ದಿಢೀರ್ ಮಗುಚಿಬಿದ್ದ ಪರಿಣಾಮ ಇಬ್ಬರು ಪ್ರವಾಸಿಗರು ಮೃತಪಟ್ಟಿರುವ ಘಟನೆ ನಡೆದಿದೆ. ಬೋಟ್ನಲ್ಲಿದ್ದ ದಂಪತಿ ಮೃತಪಟ್ಟಿದ್ದು, ಅವರ ಇಬ್ಬರು ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತರನ್ನು ಗುಜರಾತ್ ರಾಜ್ಯದ ಸೂರತ್ ಮೂಲದ ಧರ್ಮೇಶ್ (50) ಹಾಗೂ ನಿಮ್ಮಿ (48) ಎಂದು ಗುರುತಿಸಲಾಗಿದೆ. ಇವರೊಂದಿಗೆ ಬೋಟ್ನಲ್ಲಿ ಪ್ರಯಾಣಿಸುತ್ತಿದ್ದ 21 ಮತ್ತು 24 ವರ್ಷದ ಇಬ್ಬರು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಹಾರಂಗಿ ಹಿನ್ನೀರಿನಲ್ಲಿ ಸ್ಪೀಡ್ ಬೋಟ್ ಮೂಲಕ ವಿಹಾರ ನಡೆಸುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಬೋಟ್ ನಿಯಂತ್ರಣ ತಪ್ಪಿ ನೀರಿಗೆ ಮಗುಚಿದ ಪರಿಣಾಮ ದಂಪತಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇನ್ನು, ಬೋಟ್ ಚಾಲಕನ ಅಜಾಗರೂಕತೆಯೇ ಈ ಅವಘಡಕ್ಕೆ ಕಾರಣ ಎಂಬ ಆರೋಪಗಳು ಕೇಳಿಬಂದಿವೆ. ಘಟನೆಗೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬೋಟ್ ಮಗುಚಲು ಕಾರಣವಾದ ಅಂಶಗಳು ಹಾಗೂ ಚಾಲಕನ ನಿರ್ಲಕ್ಷ್ಯದ ಆರೋಪದ ಸತ್ಯಾಸತ್ಯತೆ ಕುರಿತು ಪೊಲೀಸರು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ.









