ನೀಲೇಶ್ವರ : ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಬದಿ ನಿಂತಿದ್ದ ಲಾರಿಯ ಹಿಂಭಾಗಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ. ಪದನ್ನಕ್ಕಾಡ್ನ ನೆಹರೂ ಕಾಲೇಜಿನ ಮುಂಭಾಗದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟ ಯುವಕರನ್ನು ಪದಿಂಜರಂಕೊಝುವಲ್ ಮೂಲದ ಅನುರಾಗ್ (22) ಹಾಗೂ ಆನಂದಕೃಷ್ಣನ್ (24) ಎಂದು ಗುರುತಿಸಲಾಗಿದೆ. ಮೃತ ಅನುರಾಗ್ ನೀಲೇಶ್ವರಂನ ಪ್ರಸಿದ್ಧ ‘ವಸಂತ ಹೋಟೆಲ್’ನಲ್ಲಿ ಕ್ಯಾಷಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನವೆಂಬರ್ 2, ಸೋಮವಾರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಅನುರಾಗ್ ಹಾಗೂ ಆನಂದಕೃಷ್ಣನ್ ಅವರು ನೀಲೇಶ್ವರಂ ಕಡೆಯಿಂದ ಕಾಞಂಗಾಡ್ ರಸ್ತೆಯಲ್ಲಿರುವ ಅರೈಲ್ ಭಗವತಿ ದೇವಸ್ಥಾನಕ್ಕೆ ಬೈಕ್ನಲ್ಲಿ ತೆರಳುತ್ತಿದ್ದರು.
ಪಡನ್ನಕ್ಕಾಡ್ ನೆಹರೂ ಕಾಲೇಜು ಬಳಿ ಬೈಕ್ ತಲುಪುತ್ತಿದ್ದಂತೆಯೇ, ಹೆದ್ದಾರಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಯ ಹಿಂಭಾಗಕ್ಕೆ ಚಾಲಕನ ನಿಯಂತ್ರಣ ತಪ್ಪಿ ಭೀಕರವಾಗಿ ಢಿಕ್ಕಿಯಾಗಿದೆ. ಡಿಕ್ಕಿಯ ಭ ರಸಭಸಕ್ಕೆ ಯುವಕರು ಸಂಚರಿಸುತ್ತಿದ್ದ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತ ಸಂಭವಿಸಿದ ತಕ್ಷಣವೇ ಸ್ಥಳೀಯರು ಹಾಗೂ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಇತರ ಪ್ರಯಾಣಿಕರು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಇಬ್ಬರೂ ಯುವಕರನ್ನು ತಕ್ಷಣವೇ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಕೊನೆಯುಸಿರೆಳೆದಿದ್ದಾರೆ.








