ಕಠ್ಮಂಡು: ನೇಪಾಳದ ಮೌಂಟ್ ಎವರೆಸ್ಟ್ ಸಮೀಪದ ಸೋಲುಖುಂಬು ಜಿಲ್ಲೆಯ ಫೆರೆಚೆ ಹೆಲಿಪ್ಯಾಡ್ನಲ್ಲಿ ಎರಡು ಹೆಲಿಕಾಪ್ಟರ್ಗಳು ಇಳಿಯುವ ವೇಳೆ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಭಾರತೀಯ ಪ್ರವಾಸಿಗರೊಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬ ಪ್ರಯಾಣಿಕ ಗಾಯಗೊಂಡಿದ್ದು, ಅಪಘಾತದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನವೆಂಬರ್ 3ರಂದು ಬೆಳಗ್ಗೆ ಈ ದುರಂತ ಸಂಭವಿಸಿದೆ. ನೇಪಾಳದ ಸೋಲುಖುಂಬು ಜಿಲ್ಲೆಯ ಖುಂಬು ಪಸಾಂಗ್ ಲ್ಹಾಮು ಗ್ರಾಮೀಣ ಪುರಸಭೆಯ ವಾರ್ಡ್ 4ರ ಫೆರೆಚೆ ಹೆಲಿಪ್ಯಾಡ್ನಲ್ಲಿ ಬೆಳಗ್ಗೆ ಸುಮಾರು 8.11ಕ್ಕೆ ಅಪಘಾತ ಸಂಭವಿಸಿದೆ.
ಏರ್ ಡೈನಸ್ಟಿ ಮತ್ತು ಫಿಶ್ಟೇಲ್ ಏರ್ ಸಂಸ್ಥೆಗಳಿಗೆ ಸೇರಿದ ಹೆಲಿಕಾಪ್ಟರ್ಗಳು ಲ್ಯಾಂಡಿಂಗ್ ವೇಳೆ ಪರಸ್ಪರ ಡಿಕ್ಕಿ ಹೊಡೆದಿವೆ. ಎರಡೂ ಹೆಲಿಕಾಪ್ಟರ್ಗಳ ರೋಟರ್ ಬ್ಲೇಡ್ಗಳು ಒಂದಕ್ಕೊಂದು ತಾಗಿದ ಪರಿಣಾಮ ಅವು ನೆಲಕ್ಕೆ ಅಪ್ಪಳಿಸಿವೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಅಪಘಾತದ ದೃಶ್ಯ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೆಲಿಕಾಪ್ಟರ್ಗಳು ಇಳಿಯುವ ಕ್ಷಣದಲ್ಲಿ ರೋಟರ್ಗಳು ಡಿಕ್ಕಿಯಾಗುತ್ತಿರುವುದು ಕಂಡುಬಂದಿದೆ. ಅಪಘಾತದಲ್ಲಿ ಮೃತಪಟ್ಟವರನ್ನು 47 ವರ್ಷದ ಭಾರತೀಯ ಪ್ರಜೆ ವಸಂತ್ ಕುಮಾರ್ ಬಲರಾಮಮಡು ಎಂದು ಗುರುತಿಸಲಾಗಿದೆ ಎಂದು ವರದಿಯಾಗಿದೆ.
ಗಾಯಗೊಂಡವರು ನ್ಯೂಜಿಲೆಂಡ್ ಪೌರತ್ವ ಹೊಂದಿರುವ ಭಾರತೀಯ ಮೂಲದ 53 ವರ್ಷದ ಶೈಲೇಶ್ ಕಿಶನ್ ಪಟೇಲ್ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ. ಗಾಯಾಳುವನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಲುಕ್ಲಾಗೆ ಕರೆದೊಯ್ಯಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಠ್ಮಂಡುವಿಗೆ ಸ್ಥಳಾಂತರಿಸುವ ಕ್ರಮ ಕೈಗೊಳ್ಳಲಾಗಿದೆ. ಹೆಲಿಕಾಪ್ಟರ್ಗಳಲ್ಲಿ ಎಷ್ಟು ಮಂದಿ ಪ್ರಯಾಣಿಸುತ್ತಿದ್ದರು ಹಾಗೂ ಸಿಬ್ಬಂದಿಯ ಸ್ಥಿತಿಗತಿ ಕುರಿತು ಆರಂಭದಲ್ಲಿ ಸ್ಪಷ್ಟ ಮಾಹಿತಿ ಲಭ್ಯವಾಗಿರಲಿಲ್ಲ. ಅಪಘಾತದಲ್ಲಿ ಗಾಯಗೊಂಡ ನೇಪಾಳಿ ಪೈಲಟ್ಗೂ ಸ್ಥಳೀಯವಾಗಿ ಚಿಕಿತ್ಸೆ ನೀಡಲಾಗಿದೆ ಎಂದು ಎಪಿ ವರದಿ ತಿಳಿಸಿದೆ.
ಫೆರೆಚೆ ಪ್ರದೇಶವು ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ಗೆ ತೆರಳುವ ಪ್ರಮುಖ ಮಾರ್ಗದಲ್ಲಿದೆ. ಕಠ್ಮಂಡುವಿನಿಂದ ಸುಮಾರು 150 ಕಿ.ಮೀ. ದೂರದಲ್ಲಿರುವ ಈ ಪ್ರದೇಶ ಸಮುದ್ರ ಮಟ್ಟದಿಂದ ಸುಮಾರು 4,200 ಮೀಟರ್ ಎತ್ತರದಲ್ಲಿದೆ. ನೇಪಾಳದ ಹಿಮಾಲಯ ಪ್ರದೇಶಗಳಲ್ಲಿ ಪ್ರವಾಸಿಗರು, ಪರ್ವತಾರೋಹಿಗಳು ಮತ್ತು ಚಾರಣಿಗರನ್ನು ಸಾಗಿಸಲು ಹೆಲಿಕಾಪ್ಟರ್ಗಳು ಪ್ರಮುಖ ಸಾರಿಗೆ ವ್ಯವಸ್ಥೆಯಾಗಿವೆ. ರಸ್ತೆ ಸಂಪರ್ಕವಿಲ್ಲದ ಎತ್ತರದ ಪ್ರದೇಶಗಳಲ್ಲಿ ಅನಾರೋಗ್ಯಕ್ಕೊಳಗಾದ ಅಥವಾ ಸಂಕಷ್ಟಕ್ಕೆ ಸಿಲುಕಿದ ಚಾರಣಿಗರನ್ನು ಸ್ಥಳಾಂತರಿಸಲು ಹೆಲಿಕಾಪ್ಟರ್ಗಳನ್ನೇ ಅವಲಂಬಿಸಲಾಗುತ್ತದೆ.
ನೇಪಾಳದ ಜಿಲ್ಲಾ ಪೊಲೀಸ್ ಕಚೇರಿ ಅಪಘಾತವನ್ನು ದೃಢಪಡಿಸಿದ್ದು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದೆ. ಎರಡೂ ಹೆಲಿಕಾಪ್ಟರ್ಗಳ ರೋಟರ್ಗಳು ಹೇಗೆ ಡಿಕ್ಕಿಯಾದವು ಮತ್ತು ಲ್ಯಾಂಡಿಂಗ್ ವೇಳೆ ಯಾವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.








