ತಿರುವನಂತಪುರಂ: ಕೇರಳದ ರಾಜ್ಯ ರಾಜಧಾನಿಯಲ್ಲಿ ಭಾರಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಭಾನುವಾರದಿಂದ ನಾಪತ್ತೆಯಾಗಿದ್ದ ಪ್ಲಸ್ ಒನ್ (11ನೇ ತರಗತಿ) ವಿದ್ಯಾರ್ಥಿ ಎ.ಡಿ. ಅಭಿರಾಮ್ (17) ಕೊಲೆ ಮಾಡಿ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿಸಿ ದೇವಸ್ಥಾನದ ಬಳಿ ಎಸೆಯಲಾಗಿದ್ದು, ಇದೀಗ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಸೋಮವಾರ ಸಂಜೆ ಶ್ರೀಕರಿಯಂನ ಪಂಗಪ್ಪಾರದಲ್ಲಿರುವ ಕಮುಕಿನ್ ಕೋಡ್ ದೇವಸ್ಥಾನದ ಬಳಿಯ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿಯ ಶವ ಗೋಣಿಚೀಲದಲ್ಲಿ ಪತ್ತೆಯಾಗಿದೆ.
ಪ್ರಕರಣ ಸಂಬಂಧ ತನಿಖೆ ತೀವ್ರಗೊಳಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ: 17 ವರ್ಷದ ಅಪ್ರಾಪ್ತ ಬಾಲಕ (ಮೊದಲ ಆರೋಪಿ – ಕೊಲೆಗಾರ) , ಉಮರ್ (21) (ಎರಡನೇ ಆರೋಪಿ – ಅಪರಾಧ ಹಿನ್ನೆಲೆ ಹೊಂದಿದ್ದು ಶವ ವಿಲೇವಾರಿಗೆ ನೆರವಾದವನು), ಅನಂತ (18) (ಮೂರನೇ ಆರೋಪಿ – ಅಪ್ರಾಪ್ತನ ಗೆಳತಿ) ಪೊಲೀಸರ ತನಿಖೆಯಲ್ಲಿ ಪ್ರೇಮ ವೈಷಮ್ಯ ಹಾಗೂ ತ್ರಿಕೋನ ಪ್ರೇಮ ವಿವಾದ ಕೊಲೆಗೆ ಮುಖ್ಯ ಕಾರಣ ಎಂದು ತಿಳಿದುಬಂದಿದೆ.
17 ವರ್ಷದ ಅಪ್ರಾಪ್ತ ಬಾಲಕ ಹಾಗೂ ಆತನ ಮಾಜಿ ಗೆಳತಿ (ಅನಂತ) ಇತ್ತೀಚೆಗೆ ಬೇರ್ಪಟ್ಟಿದ್ದರು. ತದನಂತರ ಅನಂತ ಕಜಕೂಟಂನ ಸರ್ಕಾರಿ ಐಟಿಐ ವಿದ್ಯಾರ್ಥಿಯಾಗಿದ್ದ ಅಭಿರಾಮ್‌ನ ಇನ್ನೊಬ್ಬ ಸ್ನೇಹಿತನೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಳು. ಮಾಜಿ ಗೆಳತಿ ತನ್ನ ಹೊಸ ಗೆಳೆಯನ ಜೊತೆಗಿನ ಫೋಟೋ ಕಳುಹಿಸಿದಾಗ ಕೆರಳಿದ್ದ ಅಪ್ರಾಪ್ತ ಬಾಲಕ, ಆ ಹೊಸ ಗೆಳೆಯನನ್ನು ಕೊಲ್ಲಲು ಸಂಚು ರೂಪಿಸಿದ್ದನು. ತನ್ನ ಮಾಜಿ ಗೆಳತಿಯ ಹೊಸ ಗೆಳೆಯ ಹಾಗೂ ಅಭಿರಾಮ್ ಆಪ್ತ ಸ್ನೇಹಿತರಾಗಿದ್ದರು. ಹೀಗಾಗಿ ಅಭಿರಾಮ್‌ನನ್ನು ಬೆದರಿಸಿ ಆ ಗೆಳೆಯನನ್ನು ನಿರ್ಜನ ಪ್ರದೇಶಕ್ಕೆ ಕರೆಸಲು ಅಪ್ರಾಪ್ತ ಯೋಜಿಸಿದ್ದನು. ಕೊಲೆ ನಡೆಯುವ ಎರಡು ದಿನಗಳ ಮೊದಲು ಅನಂತಳ ಮೊಬೈಲ್ ಫೋನ್ ಕಸಿದುಕೊಂಡಿದ್ದ ಅಪ್ರಾಪ್ತ, ಆಕೆಯೇ ಸಂದೇಶ ಕಳುಹಿಸುತ್ತಿದ್ದಾಳೆಂದು ನಂಬಿಸಿ ಅಭಿರಾಮ್‌ನನ್ನು ಪಂಗಪ್ಪಾರಕ್ಕೆ ಬರಲು ಸೂಚಿಸಿದ್ದನು.
ಅಭಿರಾಮ್ ಸ್ಥಳಕ್ಕೆ ತಲುಪಿದಾಗ ಆತನ ಮೂಲಕ ಸ್ನೇಹಿತನನ್ನು ಕರೆಸಲು ಯತ್ನಿಸಲಾಗಿದೆ. ಆದರೆ ಅಭಿರಾಮ್ ಎಷ್ಟೇ ಸಂಪರ್ಕಿಸಿದರೂ ಆ ಸ್ನೇಹಿತ ಸ್ಥಳಕ್ಕೆ ಬರಲಿಲ್ಲ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾದಾಗ ಅಭಿರಾಮ್ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣವೇ ಆತನ ತಲೆಗೆ ಹೊಡೆದು ಬೀಳಿಸಿದ 17 ವರ್ಷದ ಅಪ್ರಾಪ್ತ ಬಾಲಕ, ತನ್ನ ಸೊಂಟದ ಬೆಲ್ಟ್‌ನಿಂದ ಕತ್ತು ಹಿಸುಕಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಕೊಲೆಯ ನಂತರ ಕ್ರಿಮಿನಲ್ ಹಿನ್ನೆಲೆಯ ಉಮರ್‌ಗೆ ಕರೆ ಮಾಡಿ, ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿಸಿ ಕಮುಕಿನ್ ಕೋಡ್ ದೇವಸ್ಥಾನದ ಬಳಿಯ ನಿರ್ಜನ ಪ್ರದೇಶಕ್ಕೆ ಎಸೆದು ಪರಾರಿಯಾಗಿದ್ದರು.
ಪಂಗಪ್ಪಾರದ ಭಗತ್ ಸಿಂಗ್ ನಗರದ ನಿವಾಸಿ, ನಳಂಚಿರ ಶಾಲೆಯ ವಿದ್ಯಾರ್ಥಿ ಅಭಿರಾಮ್ ಭಾನುವಾರ ಮಧ್ಯಾಹ್ನ 3 ಗಂಟೆಗೆ ಮನೆಯಿಂದ ತೆರಳಿದ್ದರು. ಸಂಜೆ 7 ಗಂಟೆಗೆ ಮನೆಗೆ ಕರೆ ಮಾಡಿ ಬೇಗ ಬರುವುದಾಗಿ ಹೇಳಿದ್ದವರ ಫೋನ್ ಸ್ವಿಚ್ ಆಫ್ ಆದಾಗ ಕುಟುಂಬಸ್ಥರು ಶ್ರೀಕರಿಯಂ ಠಾಣೆಗೆ ನಾಪತ್ತೆ ದೂರು ನೀಡಿದ್ದರು.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಭಿರಾಮ್ ಕಾರಿನಲ್ಲಿ ತೆರಳಿರುವುದು ಹಾಗೂ ಆತನ ಸೋಶಿಯಲ್ ಮೀಡಿಯಾ ಖಾತೆಗೆ ಸಂದೇಶ ಬಂದಿರುವುದು ಪತ್ತೆಯಾಗಿದೆ. ಪೊಲೀಸರು ಅನಂತ ಹಾಗೂ ಅಪ್ರಾಪ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯ ಒಪ್ಪಿಕೊಂಡು ಶವ ಇಟ್ಟ ಸ್ಥಳ ತೋರಿಸಿದ್ದಾರೆ. ಮೃತ ಅಭಿರಾಮ್ ತಂದೆ ಮಧು ಕುಮಾರ್ ಕೂಲಿ ಕಾರ್ಮಿಕರಾಗಿದ್ದು, ತಾಯಿ ವಿದೇಶದಲ್ಲಿದ್ದಾರೆ. ಶ್ರೀಕರಿಯಂ ಪೊಲೀಸರು BNS 2023 ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮಂಗಳವಾರ ಶವಪರೀಕ್ಷೆ ನಡೆಯಲಿದೆ.








