ಕೋಝಿಕ್ಕೋಡ್: ಕಳ್ಳಸಾಗಣೆ ಚಿನ್ನದೊಂದಿಗೆ ವಿದೇಶದಿಂದ ಆಗಮಿಸಿದ್ದ ಮಹಿಳಾ ಪ್ರಯಾಣಿಕಳನ್ನು ವಾಹನ ಸಮೇತ ದರೋಡೆ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ಕರಿಪುರದ ಕ್ಯಾಲಿಕಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಆದರೆ ಮಾಹಿತಿ ತಿಳಿಯುತ್ತಿದ್ದಂತೆ ಸಿನಿಮೀಯ ರೀತಿಯಲ್ಲಿ 12 ಕಿಲೋಮೀಟರ್ ಬೆನ್ನಟ್ಟಿದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕಣ್ಣೂರು ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ದುಬೈನಿಂದ 18 ಪವನ್ ಚಿನ್ನದೊಂದಿಗೆ ಆಗಮಿಸಿದ್ದ ಮಹಿಳೆ ಹಾಗೂ ಆಕೆಯನ್ನು ಕರೆದೊಯ್ಯಲು ಬಂದಿದ್ದ ಗ್ಯಾಂಗ್ ಅನ್ನು ಗುರಿಯಾಗಿಸಿಕೊಂಡು ಈ ದರೋಡೆಗೆ ಯತ್ನಿಸಲಾಗಿತ್ತು. ಬುಧವಾರ ಬೆಳಿಗ್ಗೆ 11:30 ರ ಸುಮಾರಿಗೆ ದುಬೈನಿಂದ ಬಂದಿಳಿದಿದ್ದ 18 ಪವನ್ ಚಿನ್ನದೊಂದಿಗೆ ಬಂದಿದ್ದ ಮಹಿಳಾ ಪ್ರಯಾಣಿಕಳು ಕಾರಿನಲ್ಲಿ ಅಂತರರಾಷ್ಟ್ರೀಯ ಆಗಮನ ತಂಗುದಾಣದಿಂದ ಹೊರಬರುತ್ತಿದ್ದಂತೆ ಈ ಘಟನೆ ಸಂಭವಿಸಿದೆ.
ಚಿನ್ನವನ್ನು ಸ್ವೀಕರಿಸಲು ಬಂದಿದ್ದ ವ್ಯಕ್ತಿಯೊಬ್ಬ ಕಾರಿನ ಹಿಂಭಾಗದಲ್ಲಿ ಚೀರಿಕೊಂಡು ಓಡುತ್ತಿರುವುದನ್ನು, ಅದೇ ವೇಳೆಗೆ ಸೋಮವಾರ ನಡೆದಿದ್ದ ಮತ್ತೊಂದು ದರೋಡೆ ಯತ್ನದ ತನಿಖೆಗೆ ಗಸ್ತು ತಿರುಗುತ್ತಿದ್ದ ಕರಿಪುರ ಸ್ಟೇಷನ್ ಹೌಸ್ ಆಫೀಸರ್ ನೇತೃತ್ವದ ಪೊಲೀಸ್ ತಂಡ ಹಾಗೂ ವಿಶೇಷ ದಳ ಗಮನಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಜೀಪ್ ಹಾಗೂ ಬೈಕ್ಗಳಲ್ಲಿ ಆ ಕಾರನ್ನು ಬೆನ್ನಟ್ಟಿದ್ದಾರೆ.
ಪೋಲಿಸರು ಬೆನ್ನಟ್ಟುತ್ತಿರುವುದನ್ನು ಕಂಡ ದರೋಡೆಕೋರ ಗ್ಯಾಂಗ್ ಏರ್ಪೋರ್ಟ್ನಿಂದ 12 ಕಿಲೋಮೀಟರ್ ದೂರದಲ್ಲಿರುವ ಪುಲಿಕ್ಕಲ್ನ ಅಂತಿಯೂರ್ಕುನ್ನು ರಸ್ತೆಯ ಕಡೆಗೆ ಕಾರನ್ನು ಕೊಂಡೊಯ್ದಿದೆ.
ಆದರೆ ಬಿಡದ ಪೊಲೀಸರು ಕಾರನ್ನು ಮುತ್ತಿಗೆ ಹಾಕಿ ತಡೆದಿದ್ದಾರೆ. ಈ ವೇಳೆ ಸ್ಥಳೀಯ ನಿವಾಸಿಗಳು ಪೊಲೀಸರ ನೆರವಿಗೆ ಧಾವಿಸಿದ್ದು, ತೀವ್ರ ಪ್ರತಿರೋಧ ಒಡ್ಡಿದ ಆರೋಪಿಗಳನ್ನು ಪೊಲೀಸರು ಬಲಪ್ರಯೋಗ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.
ದರೋಡೆ ಯತ್ನಕ್ಕೆ ಸಂಬಂಧಿಸಿದಂತೆ ಕಣ್ಣೂರು ಮೂಲದ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ: ಶ್ರೀಲಾಲ್ , ಪ್ರಿನ್ಸ್ ,ಸುಬಿತ್ ,ಜಬೀರ್ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳು ಕಣ್ಣೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ದರೋಡೆ ಮತ್ತು ಹಫ್ತಾ ವಸೂಲಿ ಪ್ರಕರಣಗಳಲ್ಲಿ ಭಾಗಿಯಾಗಿರುವ ನಿರಂತರ ಅಪರಾಧಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಚಿನ್ನದೊಂದಿಗೆ ಆಗಮಿಸಿದ್ದ ಮಹಿಳಾ ಪ್ರಯಾಣಿಕಳನ್ನು ತಲಶ್ಶೇರಿಯ ತಿರುವಂಗಾಡ್ ಮೂಲದ ಪ್ರಿಯಾಂಕಾ (34) ಎಂದು ಗುರುತಿಸಲಾಗಿದೆ. ಆಕೆಯ ಬಳಿಯಿದ್ದ 18 ಪವನ್ ಚಿನ್ನವನ್ನು ಜಪ್ತಿ ಮಾಡಲಾಗಿದೆ.
ಈ ದರೋಡೆ ಸಂಚಿನಲ್ಲಿ ಪ್ರಿಯಾಂಕಾ ಅವರ ಪಾತ್ರವೂ ಇದೆಯೇ ಅಥವಾ ಈಕೆಯನ್ನು ಬಳಸಿಕೊಂಡು ಚಿನ್ನ ಕಳ್ಳಸಾಗಣೆ ಮಾಡಿಸಲಾಗುತ್ತಿತ್ತೇ ಎಂಬ ಬಗ್ಗೆಯೂ ಕರಿಪುರ ಪೊಲೀಸರು ಕಠಿಣ ತನಿಖೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ BNS 2023 ರ ಅಡಿಯಲ್ಲಿ ದರೋಡೆ ಯತ್ನ ಹಾಗೂ ಅಪರಾಧಿಕ ಸಂಚಿನಡಿ ಪ್ರಕರಣ ದಾಖಲಿಸಲಾಗಿದೆ.








