ಮಹಾರಾಷ್ಟ್ರ: ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿ, ಒಂದೇ ಕುಟುಂಬದ ಆರು ಮಂದಿ ಸಜೀವ ದಹನವಾದ ಘಟನೆ ದುರಂತ ಮಹಾರಾಷ್ಟ್ರದ ಧಾರಾಶಿವ ಜಿಲ್ಲೆಯಲ್ಲಿ ಸಂಭವಿಸಿದೆ. ಉತ್ತಮ್ ತ್ರಿಂಬಕ್ (75), ಅವರ ಪತ್ನಿ ಚಂದ್ರಕಲಾ (70), ಮಗ ಗೋವಿಂದ್ (47), ಮಗಳು ಜ್ಯೋತಿ (42) ಹಾಗೂ ಮೊಮ್ಮಕ್ಕಳಾದ ಗಾಯತ್ರಿ (16) ಮತ್ತು ಸಿದ್ಧಿ (15) ಸಾವನ್ನಪ್ಪಿದ ದುರ್ದೈವಿಗಳು.
ಧಾರಾಶಿವ್ ಜಿಲ್ಲೆಯ ಯೆದ್ಶಿ ಗ್ರಾಮದಲ್ಲಿ ಮಧ್ಯರಾತ್ರಿ ವೇಳೆಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಮಾತ್ರದಲ್ಲೇ ಬೆಂಕಿಯ ಜ್ವಾಲೆ ಇಡೀ ಮನೆ ಹಾಗೂ ಮೂರು ತಲೆಮಾರುಗಳಿಂದ ನಡೆಸಿಕೊಂಡು ಬರುತ್ತಿದ್ದ ದಿನಸಿ ಅಂಗಡಿಯನ್ನು ಆವರಿಸಿದ್ದು, ಸಂಪೂರ್ಣವಾಗಿ ಸುಟ್ಟು ಬೂದಿಯಾಗಿದೆ. ಪುಣೆ ಮತ್ತು ಧಾರಾಶಿವ್ನಲ್ಲಿ ಶಿಕ್ಷಣ ಪಡೆಯುತ್ತಿದ್ದ ಸಹೋದರಿಯರಾದ ಸಿದ್ಧಿ ಮತ್ತು ಗಾಯತ್ರಿ, ದೀಪಾವಳಿ ಹಬ್ಬದ ರಜೆ ನಿಮಿತ್ತ ಮನೆಗೆ ಬಂದಿದ್ದರು. ಆದರೆ ವಿಧಿಯಾಟಕ್ಕೆ ಇಬ್ಬರೂ ಹಬ್ಬದ ಆಚರಣೆಯ ನಡುವೆಯೇ ಜೀವ ಕಳೆದುಕೊಂಡಿದ್ದಾರೆ.
ಮನೆಯೊಳಗೆ ಸಿಲುಕಿದ್ದ ಕುಟುಂಬದವರನ್ನು ರಕ್ಷಿಸಲು ಸ್ಥಳೀಯ ಗ್ರಾಮಸ್ಥರು ಹತಾಶ ಯತ್ನ ನಡೆಸಿದರು. ಜೆಸಿಬಿ ಯಂತ್ರವನ್ನು ತರಿಸಿ ಮನೆಯ ಗೋಡೆಗಳನ್ನು ಒಡೆದು ಒಳಪ್ರವೇಶಿಸಲು ಯತ್ನಿಸಿದರಾದರೂ, ಬೆಂಕಿಯ ತೀವ್ರತೆಯಿಂದಾಗಿ ಅಷ್ಟರಲ್ಲಾಗಲೇ ಆರೋಪಿಗಳು ಶವವಾಗಿದ್ದರು. ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ದೀಪಾವಳಿ ರಾತ್ರಿ ಮುಂಬೈನ ವಿವಿಧ ಭಾಗಗಳಲ್ಲೂ ಮೂರು ಪ್ರತ್ಯೇಕ ಬೆಂಕಿ ಅವಘಡಗಳು ಸಂಭವಿಸಿದ್ದು, ಹಲವಾರು ಗುಡಿಸಲುಗಳು, ಅಂಗಡಿಗಳು, ಗ್ಯಾರೇಜ್ ಹಾಗೂ ವಾಣಿಜ್ಯ ಕಟ್ಟಡದ ಭಾಗಗಳು ಬೆಂಕಿಗಾಹುತಿಯಾಗಿವೆ. ಈ ಸಾಲು ಸಾಲು ಅಗ್ನಿ ಅವಘಡಗಳ ಹಿನ್ನೆಲೆಯಲ್ಲಿ ಮುಂಬೈ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮಹಾನಗರದಲ್ಲಿ ನವೆಂಬರ್ 25ರವರೆಗೆ ರಾಕೆಟ್ ಮತ್ತು ವೈಮಾನಿಕ (ಎರಿಯಲ್) ಪಟಾಕಿಗಳನ್ನು ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ.








