ಬ್ರಹ್ಮಾವರ : ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಪೇತ್ರಿ ನ್ಯೂ ಕುಬೇರ ಬಾರ್ ಅಂಡ್ ರೆಸ್ಟೋರೆಂಟ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಹಣಕಾಸಿನ ವಿಚಾರಕ್ಕೆ ಪರಸ್ಪರ ಹೊಡೆದಾಡಿಕೊಂಡು ಗಲಾಟೆ ನಡೆಸಿದ್ದ ಮೂವರ ವಿರುದ್ದ ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನವೆಂಬರ್ 9ರಂದು ರಾತ್ರಿ ಸುಮಾರು 10:00 ಗಂಟೆಗೆ ಪೇತ್ರಿ ಬಾರ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ 2-3 ಜನರು ಪರಸ್ಪರ ಜಗಳವಾಡುತ್ತ ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟುಮಾಡುತ್ತಿರುವ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಗೆ ಮಾಹಿತಿ ಲಭಿಸಿತ್ತು. ಠಾಣೆಯ ಎಸ್ಎಚ್ಒ ರಾಘವೇಂದ್ರ ಅವರು ತಕ್ಷಣವೇ ಪಿಎಸ್ಐ ಅವರಿಗೆ ಮಾಹಿತಿ ನೀಡಿ, ಸಿಬ್ಬಂದಿಯೊಂದಿಗೆ ರಾತ್ರಿ 10:30ರ ಸುಮಾರಿಗೆ ಸ್ಥಳಕ್ಕೆ ಧಾವಿಸಿದರು.
ಆ ವೇಳೆ ಆರೋಪಿಗಳಾದ ಸುನೀಲ್ ನಾಯ್ಕ್, ರೋಶನ್ ಡಿಸೋಜಾ ಮತ್ತು ರೂಪೇಶ್ ಶೆಟ್ಟಿ ಹಣಕಾಸಿನ ವಿಚಾರದಲ್ಲಿ ಮಾತುಕತೆ ನಡೆಸಿ, ತದನಂತರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಳ್ಳುತ್ತ ಕೈ ಕೈ ಮಿಲಾಯಿಸಿ ಹೊಡೆದಾಡಿಕೊಳ್ಳುತ್ತಿರುವುದು ಕಂಡುಬಂದಿದೆ.
ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿಯನ್ನು ನೋಡುತ್ತಿದ್ದಂತೆಯೇ ಆರೋಪಿಗಳು ಓಡಿಹೋಗಲು ಯತ್ನಿಸಿದ್ದು, ಪೊಲೀಸರು ಅವರನ್ನು ಸುತ್ತುವರಿದು ವಶಕ್ಕೆ ಪಡೆದಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಹಣಕಾಸಿನ ವಿವಾದದಿಂದಾಗಿ ಸಾರ್ವಜನಿಕ ಸ್ಥಳದಲ್ಲಿ ಜಗಳವಾಡಿದ್ದಾಗಿ ತಿಳಿದುಬಂದಿದೆ. ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.








