ಕೋಲ್ಕತ್ತಾ: ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಹರಣದ ಬೆದರಿಕೆ ಸಂದೇಶ ಪತ್ತೆಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಮುಂಬೈಗೆ ತೆರಳಲು ಸಿದ್ಧವಾಗಿದ್ದ ಏರ್ ಇಂಡಿಯಾ ವಿಮಾನದ ಶೌಚಾಲಯದ ಕನ್ನಡಿಯಲ್ಲಿ ಕೈಬರಹದ ಹೈಜಾಕ್ ಬೆದರಿಕೆ ಸಂದೇಶ ಕಂಡುಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಪೈಲಟ್ ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ (ಎಟಿಸಿ) ಮಾಹಿತಿ ನೀಡಿದ್ದಾರೆ. ನವೆಂಬರ್ 11ರಂದು ಬೆಳಗ್ಗೆ ಸುಮಾರು 10.20ರ ವೇಳೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಏರ್ ಇಂಡಿಯಾದ ಎಐ 2772 ವಿಮಾನವು ಕೋಲ್ಕತ್ತಾದಿಂದ ಮುಂಬೈಗೆ ಹೊರಡಲು ಸಿದ್ಧವಾಗಿತ್ತು. ಈ ಸಂದರ್ಭದಲ್ಲಿ ವಿಮಾನದ ಶೌಚಾಲಯದ ಕನ್ನಡಿಯಲ್ಲಿ ವಿಮಾನವನ್ನು ಹೈಜಾಕ್ ಮಾಡುವುದಾಗಿ ಬೆದರಿಕೆ ಹಾಕುವ ಬರಹ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಬೆದರಿಕೆ ಸಂದೇಶದ ಮಾಹಿತಿ ದೊರೆಯುತ್ತಿದ್ದಂತೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಕಾರ್ಯಪ್ರವೃತ್ತರಾದರು. ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಸಾಮಾನ್ಯ ಪಾರ್ಕಿಂಗ್ ಸ್ಥಳದಿಂದ ಪ್ರತ್ಯೇಕ ಸ್ಥಳಕ್ಕೆ ಸ್ಥಳಾಂತರಿಸಿ ತಪಾಸಣೆಗೆ ವ್ಯವಸ್ಥೆ ಮಾಡಲಾಯಿತು. ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಯಿತು. ವಿಮಾನವನ್ನು ಪ್ರತ್ಯೇಕ ಸ್ಥಳದಲ್ಲಿ ನಿಲ್ಲಿಸಿ ಭದ್ರತಾ ಸಿಬ್ಬಂದಿ ಹಾಗೂ ಬಾಂಬ್ ಪತ್ತೆ ತಂಡದಿಂದ ಪರಿಶೀಲನೆ ನಡೆಸುವ ಕ್ರಮ ಅನುಸರಿಸಲಾಯಿತು.
ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಬೆದರಿಕೆ ಘಟನೆಗಳು ವರದಿಯಾಗಿವೆ. ಅಕ್ಟೋಬರ್ 23ರಂದು ವಿಮಾನ ನಿಲ್ದಾಣದ ಮಹಿಳೆಯರ ಶೌಚಾಲಯದಲ್ಲಿ ಬಾಂಬ್ ಇಟ್ಟಿರುವುದಾಗಿ ಕೈಬರಹದ ಚೀಟಿ ಪತ್ತೆಯಾಗಿತ್ತು. ಇದರಿಂದ ಸಿಐಎಸ್ಎಫ್ ಮತ್ತು ಬಾಂಬ್ ಪತ್ತೆ ತಂಡ ಪರಿಶೀಲನೆ ನಡೆಸಿದ್ದವು. ಆದರೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿರಲಿಲ್ಲ. ಇನ್ನು ಅಕ್ಟೋಬರ್ 24ರಂದು ಫುಕೆಟ್ನಿಂದ ಕೋಲ್ಕತ್ತಾಗೆ ಬಂದ ಇಂಡಿಗೋ ವಿಮಾನದ ಶೌಚಾಲಯದ ಕನ್ನಡಿಯಲ್ಲಿ ಬಾಂಬ್ ಬೆದರಿಕೆ ಸಂದೇಶ ಕಂಡುಬಂದಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ಸ್ಥಳಾಂತರಿಸಿ, ಪ್ರಯಾಣಿಕರನ್ನು ಕೆಳಗಿಳಿಸಿದ ಬಳಿಕ ತಪಾಸಣೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿಯೂ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿರಲಿಲ್ಲ








